ಬೋಲ್ಟನ್: ಅನಾರೋಗ್ಯದ ಸಮಯದಲ್ಲಿ ದಿನಕ್ಕೆ ಮೂರ್ನಾಲ್ಕು ಬಾರಿ ವಾಂತಿ ಮಾಡಿಕೊಂಡರೇ ಸಾಕೆನಿಸುವಷ್ಟು ಸುಸ್ತಾಗುತ್ತದೆ. ಆದರೆ, ಇಲ್ಲೊಬ್ಬ ಮಹಿಳೆ ದಿನಕ್ಕೆ ಒಂದಲ್ಲ, ಎರಡಲ್ಲ, ಬರೋಬ್ಬರಿ 70 ಹಾಗೂ ಕೆಲವೊಮ್ಮೆ 70ಕ್ಕೂ ಅಧಿಕ ಬಾರಿ ವಾಂತಿ ಮಾಡಿಕೊಳ್ಳುತ್ತಾರೆ (A woman vomit more than 70 times a day) ಅಂದರೆ ನೀವು ನಂಬಲೇ ಬೇಕು.
ಹೌದು.., 39 ವರ್ಷದ ಲೀನ್ನೆ ವಿಲ್ಲನ್ ಎಂಬ ಇಂಗ್ಲೆಂಡ್ನ ಬೋಲ್ಟನ್ ನಿವಾಸಿ (Leanne Willan from Bolton) 'ಗ್ಯಾಸ್ಟ್ರೋಪರೆಸಿಸ್' (gastroparesis) ಎಂಬ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಏನಿದು ಕಾಯಿಲೆ?
ಇದೊಂದು ಅಪರೂಪದ ಹಾಗೂ ವಿಚಿತ್ರ ಕಾಯಿಲೆಯಾಗಿದ್ದು, ನಿಮ್ಮ ಹೊಟ್ಟೆಯಲ್ಲಿರುವ ಸ್ನಾಯುಗಳ ಸಾಮಾನ್ಯ ಸ್ವಾಭಾವಿಕ ಚಲನೆಯ ಮೇಲೆ, ಜೀರ್ಣಾಂಗವ್ಯೂಹದ ಪರಿಣಾಮ ಬೀರುವ ಸ್ಥಿತಿಯಾಗಿದೆ. ಹೊಟ್ಟೆಗೆ ಹೋದ ಆಹಾರವನ್ನು ಮತ್ತೆ ಮೇಲಕ್ಕೆ ದೂಡುವಂತೆ ಮಾಡುತ್ತದೆ. ಪರಿಣಾಮ ಸೇವಿಸಿದ ಆಹಾರ, ಕುಡಿದ ನೀರು ಎಲ್ಲವೂ ವಾಂತಿಯಾಗಿ ಹೊರಹೋಗುತ್ತದೆ.
ಲೀನ್ನೆ ವಿಲ್ಲನ್ ಅವರು ಅನೇಕ ವರ್ಷಗಳಿಂದ ಈ ಕಾಯಿಲೆಯಿಂದ ಬಳಲುತ್ತಿದ್ದು, ನಿರಂತರ ಅನಾರೋಗ್ಯ, ವಾಕರಿಕೆ, ನೋವು ಮತ್ತು ತಿನ್ನಲು ಸಾಧ್ಯವಾಗದ ಕಾರಣ ಮನೆಯಲ್ಲೇ ಇರುತ್ತಾರೆ. 2008ರಲ್ಲಿ ಕಾಯಿಲೆ ದೃಢಪಟ್ಟ ಬಳಿಕ ಅವರಿಗೆ ಗ್ಯಾಸ್ಟ್ರಿಕ್ ಪೇಸ್‌ಮೇಕರ್ ಅನ್ನು ಅಳವಡಿಸಲಾಯಿತು, ಇದು ವಾಂತಿ ಕಡಿಮೆ ಮಾಡಲು ಸಹಾಯ ಮಾಡಿತ್ತು.
ಆದರೆ, ಕಳೆದೆರಡು ವರ್ಷದಿಂದ ಗ್ಯಾಸ್ಟ್ರಿಕ್ ಪೇಸ್ಮೇಕರ್ನ ಬ್ಯಾಟರಿ ಖಾಲಿಯಾಗಿದ್ದು, ಇದೀಗ ಮತ್ತೆ ಅವರು ದಿನಕ್ಕೆ ಸುಮಾರು 70 ಬಾರಿ ವಾಂತಿ ಮಾಡಿಕೊಳ್ಳುತ್ತಿದ್ದಾರೆ.