ಬೀಜಿಂಗ್( ಚೀನಾ): ಹಲವಾರು ದೇಶಗಳು ಚೀನಾದ ಬೀಜಿಂಗ್ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್ ಅನ್ನು ಬಹಿಷ್ಕರಿಸಿವೆ. ಇದಷ್ಟು ಮಾತ್ರವಲ್ಲದೇ ಸ್ವಿಟ್ಜರ್ಲೆಂಡ್ನಲ್ಲಿರುವ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಪ್ರಧಾನ ಕಚೇರಿ ಬಳಿ ನೂರಾರು ಟಿಬೇಟಿಯನ್ನರು ಸಾಮೂಹಿಕ ಪ್ರತಿಭಟನೆ ನಡೆಸಿದ್ದಾರೆ.
2022ರ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟವನ್ನು 'ನರಮೇಧದ ಕ್ರೀಡಾಕೂಟ' ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಿಟ್ಜರ್ಲೆಂಡ್ನ ಲೌಸಾನ್ನೆಯಲ್ಲಿರುವ ಐಒಸಿ ಪ್ರಧಾನ ಕಚೇರಿಯಿಂದ ಒಲಿಂಪಿಕ್ ಮ್ಯೂಸಿಯಂವರೆಗೆ ಪ್ರತಿಭಟನಾ ಮೆರವಣಿಗೆಯನ್ನು ನೂರಾರು ಟಿಬೇಟಿಯನ್ನರು ನಡೆಸಿದ್ದಾರೆ. ಟಿಬೆಟ್ ಜನರ ಜೊತೆಗೆ ಉಯ್ಘರ್ ಸಮುದಾಯದ ಪ್ರತಿನಿಧಿಗಳೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಚೀನಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿದ್ದು, ಐಒಸಿಗೆ ಮನವಿ ಪತ್ರವೊಂದು ನೀಡುವ ಮೂಲಕ ಚಳಿಗಾಲದ ಒಲಿಂಪಿಕ್ ಅನ್ನು ನಡೆಸಲು ಅನುಮತಿ ನೀಡಿರುವುದಕ್ಕೆ ಪ್ರತಿಭಟನಾಕಾರರು ನಿರಾಸೆ ವ್ಯಕ್ತಪಡಿಸಿದ್ದಾರೆ ಎಂದು ಟಿಬೆಟ್ ಬ್ಯೂರೋ ಜಿನೀವಾ ತಿಳಿಸಿದೆ.