ಉಕ್ರೇನ್ ಮೇಲಿನ ರಷ್ಯಾ ದಾಳಿಗೆ ಪ್ರಮುಖ ಕಾರಣಗಳಿವು:
- ಉಕ್ರೇನ್ ನ್ಯಾಟೋಗೆ ಸೇರಿದರೆ ಅಥವಾ ಪಶ್ಚಿಮದ ರಾಷ್ಟ್ರಗಳಿಗೆ ಹತ್ತಿರವಾದರೆ ಅದು ತನ್ನ ದೇಶದ ಸುತ್ತಲೂ ನ್ಯಾಟೋ ಪಡೆಗಳಿಂದ ಸುತ್ತುವರಿಯಬಹುದು ಎಂಬ ಭಯ.
- ಈ ಹಿಂದಿನ ಸೋವಿಯತ್ ಗಣರಾಜ್ಯದ ಭಾಗವಾಗಿದ್ದ ಉಕ್ರೇನ್ ರಷ್ಯಾದೊಂದಿಗೆ ಗಟ್ಟಿಯಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿದೆ. ಅಲ್ಲದೇ, ಆ ದೇಶದಲ್ಲಿ ರಷ್ಯನ್ ಭಾಷಿಕರೇ ಹೆಚ್ಚಿದ್ದಾರೆ. ಉಕ್ರೇನ್ 1991ರಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡಿದೆ.
- ಸೋವಿಯತ್ ಗಣರಾಜ್ಯಗಳಾದ ರಷ್ಯಾ ಮತ್ತು ಉಕ್ರೇನ್ ನಡುವೆ ದೀರ್ಘಕಾಲದಿಂದ ಬಿಕ್ಕಟ್ಟು ಇದೆ. ಬಳಿಕ 2021 ರ ಬಳಿಕ ಆರಂಭದಲ್ಲಿ ರಷ್ಯಾದ ನಿಯಂತ್ರಣದಿಂದ ಉಕ್ರೇನ್ ಹೊರಬರಲು ಆರಂಭಿಸಿತು. ಕಳೆದ ವರ್ಷ ಜನವರಿಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊ ದಿಮಿರ್ ಜೆಲೆನ್ಸ್ಕಿ ಅವರು ಉಕ್ರೇನ್ ಅನ್ನು ನ್ಯಾಟೋಗೆ ಸೇರಿಸಲು ಅವಕಾಶ ನೀಡುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಒತ್ತಾಯಿಸಿದರು. ಇದು ರಷ್ಯಾವನ್ನು ಕೆರಳಿಸಿತ್ತು.
- ರಷ್ಯಾದ ಪರವಾಗಿದ್ದರು ಎಂಬ ಕಾರಣಕ್ಕಾಗಿ 2014ರಲ್ಲಿ ಉಕ್ರೇನ್ ಅಧ್ಯಕ್ಷರನ್ನು ಪದಚ್ಯುತಗೊಳಿಸಲಾಯಿತು. ಆಗ ರಷ್ಯಾ, ಉಕ್ರೇನ್ ಮೇಲೆ ದಾಳಿ ಮಾಡಿತು. ಯುದ್ಧದಲ್ಲಿ 14,000 ಕ್ಕೂ ಹೆಚ್ಚು ಜೀವಗಳು ಬಲಿಯಾಗಿದ್ದವು.
- ಪೂರ್ವ ಯುರೋಪ್ ಮತ್ತು ಉಕ್ರೇನ್‌ನಲ್ಲಿ ನ್ಯಾಟೋ ಪಡೆಗಳು ಯಾವುದೇ ಮಿಲಿಟರಿ ಚಟುವಟಿಕೆಯನ್ನು ನಡೆಸುವುದಿಲ್ಲ ಎಂಬುದನ್ನು ಪಶ್ಚಿಮ ರಾಷ್ಟ್ರಗಳು ಕಾನೂನುಬದ್ಧವಾಗಿ ಖಾತರಿ ನೀಡಬೇಕೆಂಬುದು ರಷ್ಯಾದ ವಾದ. ಈ ಮಧ್ಯೆಯೇ ಉಕ್ರೇನ್ ನ್ಯಾಟೋಗೆ ಸೇರ್ಪಡೆಗೆ ಮನವಿ ಮಾಡಿದ್ದು, ಈಗ ಯುದ್ಧ ಸಾರಲು ಕಾರಣವಾಗಿದೆ.
- ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆ ಇದೇ ಮೊದಲಲ್ಲ. ರಷ್ಯಾ ಅಧ್ಯಕ್ಷ ಪುಟಿನ್ ಬೆಂಬಲಿತ ಉಕ್ರೇನ್ ಬಂಡುಕೋರರು ಪೂರ್ವ ಉಕ್ರೇನ್‌ನ ಎರಡು ದೊಡ್ಡ ಪ್ರದೇಶಗಳನ್ನು ವಶಪಡಿಸಿಕೊಂಡಾಗ ಇದನ್ನು ಪುಟಿನ್ ಬೆಂಬಲಿಸಿದ್ದರು. ಅಲ್ಲದೇ ಸೇನಾ ಸಹಾಯ ಮತ್ತು ಆರ್ಥಿಕ ನೆರವು ನೀಡಿದ್ದರು. ಇದು ಉಕ್ರೇನ್ ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿತ್ತು.
- ಡೊಂಬಾಸ್ ಪ್ರದೇಶ ಸೇರಿದಂತೆ ಪೂರ್ವ ಉಕ್ರೇನ್‌ನಲ್ಲಿ ಸಶಸ್ತ್ರ ಸಂಘರ್ಷವನ್ನು ನಿಲ್ಲಿಸಲು ರಷ್ಯಾ ಮತ್ತು ಉಕ್ರೇನ್ ಮಿಂಕ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದರೆ, ಆ ಪ್ರದೇಶದಲ್ಲಿ ಪದೇ ಪದೇ ಘರ್ಷಣೆ ಮುಂದುವರಿದಿರುವ ಕಾರಣ ಶಾಂತಿಗಾಗಿ ತನ್ನ ಸೇನೆಯನ್ನು ಕಳುಹಿಸಿಕೊಡುವುದಾಗಿ ರಷ್ಯಾ ಹೇಳಿದೆ. ಇದು ಉಭಯ ರಾಷ್ಟ್ರಗಳ ಸಂಘರ್ಷಕ್ಕೆ ಕಾರಣವಾಗಿದೆ.