ಕರ್ನಾಟಕ

karnataka

ETV Bharat / international

ಭಾರತೀಯ ಕೊರೊನಾ ರೂಪಾಂತರಗಳಿಗೆ ನಾಮಕರಣ ಮಾಡಿದ ವಿಶ್ವ ಆರೋಗ್ಯ ಸಂಸ್ಥೆ

ರೂಪಾಂತರಗಳು ಪತ್ತೆಯಾದ ದೇಶಗಳು ಅಥವಾ ಸ್ಥಳಗಳ ಹೆಸರುಗಳಿಂದ ಅವುಗಳನ್ನು ಕರೆಯುವುದನ್ನು ತಡೆಯುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯು(WHO) ಕೋವಿಡ್​-19 ರೂಪಾಂತರಗಳಿಗೆ ಗ್ರೀಕ್ ಪದಗಳನ್ನು ಬಳಸಿ ನಾಮಕರಣ ಮಾಡಿದೆ.

WHO names COVID-19 variants first found in India as 'Kappa' and 'Delta'
ಭಾರತೀಯ ಕೊರೊನಾ ರೂಪಾಂತರಗಳಿಗೆ ನಾಮಕರಣ ಮಾಡಿದ ವಿಶ್ವ ಆರೋಗ್ಯ ಸಂಸ್ಥೆ

By

Published : Jun 1, 2021, 11:48 AM IST

ಜಿನಿವಾ: ಭಾರತದಲ್ಲಿ ಮೊದಲು ಪತ್ತೆಯಾದ B.1.617.1 ಮತ್ತು B.1.617.2 ಕೊರೊನಾ ರೂಪಾಂತರಗಳಿಗೆ ವಿಶ್ವ ಆರೋಗ್ಯ ಸಂಸ್ಥೆ (WHO) 'ಕಪ್ಪಾ' ಮತ್ತು 'ಡೆಲ್ಟಾ' ಎಂಬ ಹೆಸರುಗಳನ್ನಿಟ್ಟಿದೆ.

ಈ ಹೆಸರಿಡಲು ಕಾರಣವೇನು?

"ಕೋವಿಡ್​-19 ರೂಪಾಂತರಗಳನ್ನು ಹೆಸರಿಸುವ ಹೊಸ ನಾಮಕರಣ ಕ್ರಮವನ್ನು ನಾವು ಘೋಷಿಸುತ್ತಿದ್ದೇವೆ. ಈ ಲೇಬಲ್‌ಗಳು ಗ್ರೀಕ್ ವರ್ಣಮಾಲೆಯನ್ನು ಆಧರಿಸಿವೆ. ಇವು ರೂಪಾಂತರಗಳನ್ನು ಉಚ್ಛರಿಸಲು, ನೆನಪಿನಲ್ಲಿಟ್ಟುಕೊಳ್ಳಲು ಸರಳ ಹಾಗೂ ಸುಲಭವಾಗುತ್ತದೆ" ಎಂದು ಡಬ್ಲ್ಯುಹೆಚ್‌ಒ ಟ್ವೀಟ್​ ಮಾಡಿದೆ.

ಆದರೆ ಈ ಲೇಬಲ್‌ಗಳು ಅಸ್ತಿತ್ವದಲ್ಲಿರುವ ವೈಜ್ಞಾನಿಕ ಹೆಸರುಗಳನ್ನು ಬದಲಿಸುವುದಿಲ್ಲ. ಪ್ರಮುಖ ವೈಜ್ಞಾನಿಕ ಮಾಹಿತಿಯನ್ನು ತಿಳಿಸುವ ಈಗಾಗಲೇ ಅಸ್ತಿತ್ವದಲ್ಲಿರುವ ಹೆಸರುಗಳನ್ನು ಸಂಶೋಧನೆಯಲ್ಲಿ ಬಳಸುವುದನ್ನು ಮುಂದುವರೆಸಲಾಗುವುದು. ರೂಪಾಂತರಗಳು ಪತ್ತೆಯಾದ ದೇಶಗಳು ಅಥವಾ ಸ್ಥಳಗಳ ಹೆಸರುಗಳಿಂದ ಕರೆಯುವುದನ್ನು ತಡೆಯಲು ಹೀಗೆ ಗ್ರೀಕ್ ಪದಗಳನ್ನು ಬಳಸಲಾಗುವುದು ಎಂದು ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.

ಹೀಗಾಗಿ B.1.617.1 ರೂಪಾಂತರಕ್ಕೆ 'ಕಪ್ಪಾ' ಹಾಗೂ B.1.617.2 ರೂಪಾಂತರಕ್ಕೆ 'ಡೆಲ್ಟಾ' ಎಂದು ಹೆಸರಿಸಲಾಗಿದೆ. ಈ ಮೊದಲು ಆಯಾ ದೇಶಗಳಲ್ಲಿ ಹೊಸ ರೂಪ ಪಡೆದ ಕೊರೊನಾ ವೈರಸ್​ಗೆ ಬ್ರಿಟನ್​ ವೇರಿಯಂಟ್​, ದಕ್ಷಿಣ ಆಫ್ರಿಕಾ ವೇರಿಯಂಟ್​, B.1.617.1 ಗೆ 'ಇಂಡಿಯನ್ ವೇರಿಯಂಟ್' ಎಂದು ಕರೆಯಲಾಗುತ್ತಿತ್ತು.

ಇದನ್ನೂ ಓದಿ: B.1.617: ಮತ್ತೆ ಭಾರತೀಯ ಕೋವಿಡ್​ ರೂಪಾಂತರ 53 ದೇಶಗಳಲ್ಲಿ ಪತ್ತೆ ಎಂದ WHO

ಮೇ 25ರಂದು ಡಬ್ಲ್ಯುಹೆಚ್‌ಒ ಪ್ರಕಟಿಸಿದ ಕೋವಿಡ್​-19 ವಾರದ ವರದಿಯಲ್ಲಿ 'ಭಾರತೀಯ ಕೋವಿಡ್​ ರೂಪಾಂತರ' (B.1.617.1) 53 ದೇಶಗಳಲ್ಲಿ ಕಂಡುಬಂದಿದೆ ಎಂದು ಹೇಳಿತ್ತು. ಇದೊಂದು ಭೀಕರ ರೂಪಾಂತರವಾಗಿದ್ದು, ಇದರ ಪ್ರಸರಣ ಸಾಮರ್ಥ್ಯ ಹೆಚ್ಚಿದೆ. ಇದರ ತೀವ್ರತೆ ಬಗ್ಗೆ ಇನ್ನೂ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿತ್ತು.

ಇದಕ್ಕೂ ಮುನ್ನ ಮೇ 22ರಂದು ಭಾರತದ ಸರ್ಕಾರವು, ಕೋವಿಡ್​-19 ಬಗ್ಗೆ ತಪ್ಪು ಮಾಹಿತಿಗಳನ್ನು ಹರಡುವುದನ್ನು ತಡೆಯುವ ಸಲುವಾಗಿ 'ಇಂಡಿಯನ್ ವೇರಿಯಂಟ್' (ಭಾರತೀಯ ರೂಪಾಂತರ) ಎಂಬ ಪದವನ್ನು ಬಳಸಿ, ಉಲ್ಲೇಖಿಸುವ ಎಲ್ಲಾ ವಿಷಯಗಳು, ಪೋಸ್ಟ್​ಗಳನ್ನು ತಮ್ಮ ಫ್ಲಾರ್ಟ್​ಫಾರ್ಮ್​ನಿಂದ ತಕ್ಷಣವೇ ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣಗಳ ಕಂಪನಿಗಳಿಗೆ ಸೂಚಿಸಿತ್ತು.

ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಯಾವುದೇ ವರದಿಯಲ್ಲಿ ಕೊರೊನಾ ವೈರಸ್‌ನ ಬಿ.1.617 ರೂಪಾಂತರದೊಂದಿಗೆ 'ಇಂಡಿಯನ್ ವೇರಿಯಂಟ್' ಎಂಬ ಪದವನ್ನು ಸಂಯೋಜಿಸಿಲ್ಲ. ಪ್ರಪಂಚದಾದ್ಯಂತ ಭಾರತೀಯ ರೂಪಾಂತರಿ ಕೊರೊನಾ ಹರಡುತ್ತಿದೆ ಎಂದು ಆನ್‌ಲೈನ್‌ನಲ್ಲಿ ಸುಳ್ಳು ಮಾಹಿತಿಗಳು ಪಸರಿಸಲಾಗುತ್ತಿದೆ. ಹೀಗಾಗಿ ಭಾರತೀಯ ರೂಪಾಂತರವನ್ನು ಸೂಚಿಸುವ ಎಲ್ಲಾ ವಿಷಯಗಳನ್ನು ಡಿಲೀಟ್​ ಮಾಡಲು ತಿಳಿಸಿ ಎಲ್ಲಾ ಸೋಷಿಯಲ್​ ಮೀಡಿಯಾ ಫ್ಲಾರ್ಟ್​ಫಾರ್ಮ್​ಗಳಿಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಪತ್ರ ಬರೆದಿತ್ತು.

ABOUT THE AUTHOR

...view details