ಜಿನಿವಾ: ಟೀಕೆಗಳ ನಡುವೆಯೇ ಚೀನಾ ಸರ್ಕಾರಿ ಸ್ವಾಮ್ಯದ ಕೋವಿಡ್ ಲಸಿಕೆ 'ಸಿನೊಫಾರ್ಮ್'ನ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಅನುಮೋದನೆ ನೀಡಿ, ಜಾಗತಿಕ ಬಳಕೆಗೆ ದಾರಿ ಮಾಡಿಕೊಟ್ಟಿದೆ.
ಚೀನಾ ನ್ಯಾಷನಲ್ ಬಯೋಟೆಕ್ ಗ್ರೂಪ್ (ಸಿಎನ್‌ಬಿಜಿ) ಅಂಗಸಂಸ್ಥೆಯಾದ ಬೀಜಿಂಗ್ ಇನ್ಸ್ಟಿಟ್ಯೂಟ್ ಆಫ್ ಬಯೋಲಾಜಿಕಲ್ ಪ್ರಾಡಕ್ಟ್ಸ್ ಸಿನೊಫಾರ್ಮ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಕೊನೆಯ ಹಂತದ ಪ್ರಯೋಗಗಳಿಂದ ಲಸಿಕೆ ಶೇ.79 ರಷ್ಟು ಸುರಕ್ಷಿತ ಎಂದು ಕಂಪನಿ ಹೇಳಿಕೊಂಡಿದೆ.
"ಈ ಲಸಿಕೆಯ ಸೇರ್ಪಡೆಯಿಂದಾಗಿ ಆರೋಗ್ಯ ಕಾರ್ಯಕರ್ತರು ಮತ್ತು ಅಪಾಯದಲ್ಲಿರುವ ಜನರನ್ನು ರಕ್ಷಿಸಲು ಬಯಸುವ ದೇಶಗಳಿಗೆ ಸಾಮರ್ಥ್ಯ ಹೆಚ್ಚಲಿದೆ. ವಿವಿಧ ರಾಷ್ಟ್ರಗಳಿಗೆ ಲಸಿಕೆ ಪೂರೈಸುವ ವಿಶ್ವಸಂಸ್ಥೆಯ 'ಕೋವ್ಯಾಕ್ಸ್' ಮಹತ್ಕಾರ್ಯಕ್ಕೆ ಕೈ ಜೋಡಿಸಲು ನಾವು ಸಿನೊಫಾರ್ಮ್ ತಯಾರಿಕರನ್ನು ಒತ್ತಾಯಿಸುತ್ತೇವೆ" ಎಂದು ಡಬ್ಲ್ಯುಹೆಚ್‌ಒ ಸಹಾಯಕ-ಮಹಾನಿರ್ದೇಶಕ ಡಾ. ಮರಿಯಾಂಜೆಲಾ ಸಿಮಾವೊ ಹೇಳಿದ್ದಾರೆ.