ನೊವ್ಗೊರೊಡ್:ರಷ್ಯಾದಲ್ಲಿ ನಡೆಯುತ್ತಿರುವ ಬಹುರಾಷ್ಟ್ರೀಯ ಸೇನಾ ಜಪಾಡ್ 2021 ಸಮರಾಭ್ಯಾಸದಲ್ಲಿ ಭಾರತದ 200 ಸೈನಿಕರು ಭಾಗವಹಿಸಿದ್ದಾರೆ. ಸೆಪ್ಟೆಂಬರ್ 16ರವರೆಗೆ ಈ ಸಮರಾಭ್ಯಾಸ ನಡೆಯಲಿದೆ. ಇನ್ನು ಈ ರಷ್ಯನ್-ಬೆಲರೂಸಿಯನ್ ಜಂಟಿ ಕಾರ್ಯತಂತ್ರದ ಮುಖ್ಯ ವೇದಿಕೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾಗವಹಿಸಿದ್ದರು ಎಂದು ರಷ್ಯಾದ ಸುದ್ದಿ ಸಂಸ್ಥೆ ಟಿಎಎಸ್ಎಸ್ ವರದಿಯಲ್ಲಿ ತಿಳಿಸಿದೆ.
ಸಮರಾಭ್ಯಾಸದ ಮುಖ್ಯ ಹಂತದಲ್ಲಿ ಭಾರತ ಸೇನೆ ತನ್ನ ಮಿಲಿಟರಿ ಸಾಮರ್ಥ್ಯವನ್ನ ಅನಾವರಣಗೊಳಿಸಿ ಸೈ ಎನಿಸಿಕೊಂಡಿದೆ. ಈ ಸಮರಾಭ್ಯಾಸದಲ್ಲಿ ಭಾರತ ಸೇರಿದಂತೆ ರಷ್ಯಾದ ಸೇನಾ ಘಟಕಗಳು, ಅರ್ಮೇನಿಯಾ, ಬೆಲಾರಸ್, ಕಜಕಿಸ್ತಾನ್, ಕಿರ್ಗಿಸ್ತಾನ್ ಮತ್ತು ಮಂಗೋಲಿಯಾದ ಸಶಸ್ತ್ರ ಪಡೆಗಳ ಸೇನಾ ತುಕಡಿಗಳು ತಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶಿಸಲಿವೆ. ಕುತೂಹಲಕಾರಿ ಸಂಗತಿಯೆಂದರೆ, ಸಮರಾಭ್ಯಾಸದಲ್ಲಿ ಭಾರತ ತನ್ನ ಮಿಲಿಟರಿ ಸಾಮರ್ಥ್ಯವನ್ನು ಪ್ರದರ್ಶಿಸಿದರೆ, ವಿಯೆಟ್ನಾಂ, ಮಲೇಶಿಯಾ, ಬಾಂಗ್ಲಾದೇಶ, ಮ್ಯಾನ್ಮಾರ್, ಉಜ್ಬೇಕಿಸ್ತಾನ್ ಮತ್ತು ಶ್ರೀಲಂಕಾದ ಜೊತೆಗೆ 'ವೀಕ್ಷಕ' ರಾಷ್ಟ್ರಗಳಾಗಿ ಪಾಕಿಸ್ತಾನ ಮತ್ತು ಚೀನಾ ಸೇನಾ ಪಡೆಗಳು ಭಾಗವಹಿಸಿವೆ.