ಲಂಡನ್ (ಯುಕೆ):ಕೊರೊನಾ ವೈರಸ್ ಇಡೀ ವಿಶ್ವವನ್ನೇ ಆವರಿಸಿಕೊಂಡಿದ್ದು, ಬಹುತೇಕ ದೇಶಗಳಲ್ಲಿ ಜನ ಮನೆಯಿಂದ ಹೊರ ಬರದಂತೆ ಲಾಕ್ಡೌನ್ ಮಾಡಲಾಗಿದೆ. ಇತ್ತ ಯುಕೆಯಲ್ಲಿರುವ ಭಾರತೀಯರು ಸೇರಿದಂತೆ ವಿದೇಶಿ ಪ್ರಜೆಗಳ ವೀಸಾ ಅವಧಿ ಏ. 15ರವರೆಗೆ ವಿಸ್ತರಣೆ ಮಾಡಲಾಗಿದೆ.
ವೀಸಾ ಅವಧಿ ವಿಸ್ತರಣೆಯು ಕೊರೊನಾ ವೈರಸ್ ಪರಿಣಾಮದಿಂದಾಗಿ ಸ್ವದೇಶಕ್ಕೆ ಬರಲಾರದೆ ಸಂಕಷ್ಟಕ್ಕೆ ಸಿಲುಕಿರುವವರಿಗೆ ಸಹಕಾರಿಯಾಗಲಿದೆ. ಜನವರಿ 24ರ ನಂತರ ವೀಸಾ ಮುಗಿದಿರುವವರಿಗೆ ಇದು ಅನ್ವಯವಾಗಲಿದೆ. ಇವರೆಲ್ಲರೂ ಅಲ್ಲಿನ ಗೃಹ ಕಚೇರಿಯ CIH@homeoffice.gov.uk ಇಮೇಲ್ಗೆ ಸಂದೇಶ ಕಳುಹಿಸಿ ವೀಸಾ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ. ಜಾಗತಿಕ ಲಾಕ್‌ಡೌನ್‌ನಿಂದ ತಮ್ಮ ದೇಶಗಳಿಗೆ ತೆರಳಲು ಸಾಧ್ಯವಾಗದವರಿಗೆ ಇದು ಅನುಕೂಲವಾಗಿದೆ. ಅಲ್ಲದೆ, ಸಂಕಷ್ಟಕ್ಕೆ ಸಿಲುಕಿರುವವರು ಉಚಿತ ಸಹಾಯವಾಣಿ 08006781767 ಸಂಖ್ಯೆಗೆ ಬೆಳಗ್ಗೆ 9ರಿಂದ ಸಂಜೆ 5ರೊಳಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಒಂದು ವೇಳೆ ಸಹವಾಣಿಯ ಅವಧಿಯನ್ನು ವಿಸ್ತರಿಸುವ ಅವಶ್ಯಕತೆ ಬಂದರೆ ಅದನ್ನು ಪರಿಷ್ಕರಿಸಲಾಗುವುದು. ಅಗತ್ಯವೆನಿಸುವ ಇತರೆ ಸೌಲಭ್ಯಗಳನ್ನು ತಾತ್ಕಾಲಿಕವಾಗಿ ವಿಸ್ತರಿಸುವುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಯುಕೆಯಲ್ಲಿರುವ ಜನರ ಆರೋಗ್ಯಕ್ಕೆ ಮೊದಲ ಆದ್ಯತೆಯನ್ನು ನೀಡಲಾಗಿದೆ. ತಾವು ವಿಧಿಸಿರುವ ನಿರ್ಬಂಧಗಳನ್ನು ಉಲ್ಲಂಘಿಸಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ವೀಸಾ ಅವಧಿಯನ್ನು ವಿಸ್ತರಿಸುವ ಮೂಲಕ ಜನ ಶಾಂತಿಯಿಂದ ಇರುವಂತೆ ಹಾಗೂ ಪ್ರಮುಖ ಸೇವೆಗಳಿಗಾಗಿ ಬಂದಿರುವವರು ತಮ್ಮ ಕೆಲಸವನ್ನು ಮುಂದುವರಿಸಬಹುದು ಎಂದು ಬ್ರಿಟಿಷ್ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ತಿಳಿಸಿದ್ದಾರೆ. ಇದು ಯುಕೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಎಲ್ಲಾ ಭಾರತೀಯರಿಗೆ ಸ್ವಲ್ಪ ಮಟ್ಟಿಗೆ ಧೈರ್ಯ ತುಂಬಿದಂತಾಗಿದೆ ಎಂದು ಭಾರತಕ್ಕೆ ಹೈಕಮಿಷನರ್ ಆಗಿರುವ ಜಾನ್ ಥಾಂಪ್ಸನ್ ಹೇಳಿದ್ದಾರೆ. ಪ್ರಸ್ತುತ ನಿರ್ಮಾಣವಾಗಿರುವ ಪರಿಸ್ಥಿತಿಯಲ್ಲಿ ಭಾರತಕ್ಕೆ ವಾಪಸ್ ಬರಲಾಗದೆ ಪ್ರಯಾಣಿಕರು ಯಾವ ರೀತಿ ಯಾತನೆ ಪಡುತ್ತಿದ್ದಾರೆ ಎಂಬುದರ ಅರಿವಿದೆ. ಸದ್ಯ ಯುಕೆ ನೀಡಿರುವ ಈ ಆದೇಶದಿಂದ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಭಾರತದಲ್ಲಿರುವ ಬ್ರಿಟಿಷ್ ಪ್ರಜೆಗಳಿಗೆ ಬೇಕಿರುವ ಅಗತ್ಯ ಸೌಲಭ್ಯಗಳಿಗಾಗಿ ನಮ್ಮ ಸಿಬ್ಬಂದಿ ಮತ್ತು ನಾನು ಹಗಲಿರುಳು ಶ್ರಮಿಸುತ್ತಿರುವುದಾಗಿ ಥಾಂಪ್ಸನ್ ತಿಳಿಸಿದ್ದಾರೆ.