ವಾಷಿಂಗ್ಟನ್(ಅಮೆರಿಕ): ಒಂದು ವೇಳೆ ರಷ್ಯಾ ನ್ಯಾಟೋ ರಾಷ್ಟ್ರಗಳ ತಂಟೆಗೆ ಬಂದರೆ ಅಮೆರಿಕ ಮಧ್ಯಪ್ರವೇಶಿಸುವುದು ಖಚಿತ. ರಷ್ಯಾವನ್ನು ಈಗ ತಡೆಯದಿದ್ದರೆ, ಅದು ಮತ್ತಷ್ಟು ಧೈರ್ಯಶಾಲಿಯಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಶ್ವೇತಭವನದಲ್ಲಿ ಮಾತನಾಡಿದ ಬೈಡನ್, ಉಕ್ರೇನ್ ವಿಚಾರವಾಗಿ ಪುಟಿನ್ ಅವರೊಂದಿಗೆ ಮಾತನಾಡಲು ನಾವು ಈವರೆಗೂ ಯಾವುದೇ ಪ್ಲ್ಯಾನ್ ಮಾಡಿಲ್ಲ. ಆದರೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಿದ್ದೇವೆ. ಉಕ್ರೇನ್ ಜನರ ನೋವನ್ನು ತಗ್ಗಿಸಲು ಅಮೆರಿಕ ಮಾನವೀಯ ಪರಿಹಾರವನ್ನು ನೀಡುತ್ತದೆ ಎಂದು ಭರವಸೆ ನೀಡಿದರು.
ನ್ಯಾಟೋ ಸದಸ್ಯರಾಗಿರುವ ಪೂರ್ವ ಯುರೋಪಿಯನ್ ರಾಷ್ಟ್ರಗಳಿಗೆ ಅಗತ್ಯವಿರುವ ಎಲ್ಲಾ ಮಿಲಿಟರಿ ಸೌಲಭ್ಯಗಳನ್ನು ನಾವು ಒದಗಿಸಿದ್ದೇವೆ. ಇದರಿಂದಾಗಿ ರಷ್ಯಾದ ದಾಳಿ ದೊಡ್ಡ ಸಂಘರ್ಷಕ್ಕೆ ತಿರುಗುವುದಿಲ್ಲ ಎಂದು ಭರವಸೆ ನೀಡಿದ್ದೇವೆ. ನ್ಯಾಟೋ ಹಿಂದೆಂದಿಗಿಂತಲೂ ಹೆಚ್ಚು ಒಗ್ಗೂಡಿದೆ ಎಂದು ಬೈಡನ್ ಅಭಿಪ್ರಾಯಪಟ್ಟಿದ್ದಾರೆ.
'ಸೋವಿಯತ್ ಒಕ್ಕೂಟ ಮರುಸ್ಥಾಪನೆಗಾಗಿ':ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೆಚ್ಚಿನ ದುರುದ್ದೇಶಗಳನ್ನು ಹೊಂದಿದ್ದಾರೆ. 1988 ಮತ್ತು 1992ರ ಅವಧಿಯಲ್ಲಿ ಒಡೆದುಹೋದ ಸೋವಿಯತ್ ಯೂನಿಯನ್ ಅನ್ನು ಮತ್ತೆ ಒಗ್ಗೂಡಿಸಲು ಬಯಸಿದ್ದಾರೆ. ಆದರೆ ಅವರು ಉದ್ದೇಶಗಳು ರಾಷ್ಟ್ರಗಳ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ಬೈಡನ್ ಹೇಳಿದ್ದಾರೆ.