ಕೀವ್,ಉಕ್ರೇನ್:ರಷ್ಯಾದ ಪಡೆಗಳು ಉಕ್ರೇನ್ ಮೇಲಿನ ದಾಳಿಯನ್ನು ಮುಂದುವರೆಸಿದ್ದು, ಉಕ್ರೇನ್ ನಾಗರಿಕರನ್ನು ಮನೆಗಳಿಂದ ಹೊರದಬ್ಬಿ ರಷ್ಯಾ ಸೈನಿಕರು ಆಹಾರವನ್ನು ಕದಿಯುತ್ತಿದ್ದಾರೆ ಎಂದು ಸುಮಿ ರಾಜ್ಯದ ಗವರ್ನರ್ ಡಿಮಿಟ್ರೋ ಝೈವಿಟ್ಸ್ಕಿ ಆರೋಪಿಸಿದ್ದಾರೆ. ಮಾರ್ಚ್ 16 ರಂದು ಟೆಲಿಗ್ರಾಮ್ ಮೂಲಕ ಲೂಟಿಯ ಬಗ್ಗೆ ವಿವರವಾದ ಮಾಹಿತಿ ನೀಡಿದ ಡಿಮಿಟ್ರೋ ಝೈವಿಟ್ಸ್ಕಿ ರಷ್ಯಾ ಸೈನಿಕರ ಅಟ್ಟಹಾಸದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ದಿ ಕೀವ್ ಇಂಡಿಪೆಂಡೆಂಟ್ ವರದಿ ಮಾಡಿದೆ.
ಫೆಬ್ರವರಿ 24ರಂದು ಉಕ್ರೇನ್‌ನಲ್ಲಿ ರಷ್ಯಾದ ಪಡೆಗಳು ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಉಕ್ರೇನ್‌ನಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲು ರಷ್ಯಾದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡವಿದೆ. ಉಕ್ರೇನ್ ನೆರವಿಗೆ ಸಾಕಷ್ಟು ಐರೋಪ್ಯ ರಾಷ್ಟ್ರಗಳು ನಿಂತಿವೆ. ಉಕ್ರೇನ್ನ ನಿರಾಶ್ರಿತರು ಪಕ್ಕದ ರಾಷ್ಟ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.