ಲಿವಿವ್( ಉಕ್ರೇನ್): ರಷ್ಯಾ ಯುದ್ಧ ಘೋಷಿಸಿದ ಮೊದಲ ದಿನವೇ ಖೇರ್ಸನ್ ವಿಮಾನ ನಿಲ್ದಾಣವನ್ನು ಯಾವುದೇ ಪ್ರತಿರೋಧ ಇಲ್ಲದೇ ವಶಕ್ಕೆ ಪಡೆದಿದ್ದವು. ಇದೀಗ ಉಕ್ರೇನ್ ರಷ್ಯನ್ ಪಡೆಗಳ ವಶದಲ್ಲಿರುವ ವಿಮಾನ ನಿಲ್ದಾಣವನ್ನ ಮರು ವಶಪಡಿಸಿಕೊಳ್ಳಲು ಕಾರ್ಯಾಚರಣೆ ಆರಂಭಿಸಿದೆ.
ಈ ಬಗ್ಗೆ ಉಕ್ರೇನಿಯನ್ ಮಿಲಿಟರಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉಕ್ರೇನ್ನ ಅನಿರೀಕ್ಷಿತ ದಾಳಿಯಿಂದ ಗಲಿಬಿಲಿಗೊಂಡಿರುವ ರಷ್ಯನ್ ಪಡೆಗಳು ಯುದ್ಧ ಸಾಮಗ್ರಿಗಳನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ಉಕ್ರೇನಿಯನ್ ಪಡೆಗಳು ಖೇರ್ಸನ್ ವಾಯು ನೆಲೆ ಮೇಲೆ ನಡೆಸುತ್ತಿರುವ ಉಪಗ್ರಹ ಚಿತ್ರಗಳು ಬಿಡುಗಡೆಗೊಂಡಿದ್ದು, ದಾಳಿಯ ಚಿತ್ರಣವನ್ನು ವಿಶ್ವದ ಎದುರು ತೆರೆದಿಟ್ಟಿವೆ.
ಯುದ್ಧದ ಆರಂಭದಲ್ಲಿ ಯಾವುದೇ ಹೋರಾಟವಿಲ್ಲದೇ ರಷ್ಯಾ ಪಡೆಗಳು ಖೇರ್ಸನ್ ವಿಮಾನ ನಿಲ್ದಾಣವನ್ನು ವಶಕ್ಕೆ ಪಡೆದಿದ್ದವು. ಅಷ್ಟೇ ಅಲ್ಲ ಖೇರ್ಸನ್ ಮೇಲೆ ನಿಯಂತ್ರಣ ಸಾಧಿಸಿದ ಬಳಿಕ ಕ್ರಿಮಿಯಾಕ್ಕೆ ಇಲ್ಲಿಂದ ಸಿಹಿ ನೀರು ಪೂರೈಕೆ ಮಾಡಲು ಎಲ್ಲ ವ್ಯವಸ್ಥೆ ಮಾಡಿದೆ. ರಷ್ಯಾ 2014ರಲ್ಲೇ ಕ್ರಿಮಿಯಾವನ್ನು ವಶಕ್ಕೆ ಪಡೆದುಕೊಂಡಿತ್ತು. ಈ ವೇಳೆ ಉಕ್ರೇನ್ ಕ್ರಿಮಿಯಾಕ್ಕೆ ನೀರು ಪೂರೈಕೆ ಮಾಡುವುದನ್ನು ಬಂದ್ ಮಾಡಿತ್ತು.
ಈ ನಡುವೆ ರಷ್ಯಾ ಭೂಸೇನೆ ಉಕ್ರೇನ್ನ ವಿವಿಧ ನಗರಗಳಲ್ಲಿ ನಡೆಸುತ್ತಿದ್ದ ಭಾರಿ ದಾಳಿಯನ್ನು ಹಂತ ಹಂತವಾಗಿ ಸ್ಥಗಿತಗೊಳಿಸುತ್ತಿದೆ ಎಂದು ಉಕ್ರೇನ್ ಪಡೆ ಅಧಿಕಾರಿಗಳು ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧದ ಕೆಲವು ಪ್ರಮುಖ ಬೆಳವಣಿಗೆಗಳು ಹೀಗಿವೆ
- ಉಕ್ರೇನ್- ರಷ್ಯಾ ನಡುವೆ ಮುಂದುವರಿದ ಮಾತುಕತೆ. ಆದಾಗ್ಯೂ ಉಕ್ರೇನ್ ಮೇಲೆ ಮಿಲಿಟರಿ ದಾಳಿ ಮುಂದುವರಿದಿದೆ ಎಂದು ರಷ್ಯಾ ಹೇಳಿದೆ.
- ರಷ್ಯಾ ದಾಳಿಯನ್ನು ಸೆಪ್ಟೆಂಬರ್ 11 ದಾಳಿಗೆ ಹೋಲಿಸಿರುವ ಉಕ್ರೇನ್ ಅಧ್ಯಕ್ಷರು, ತಮ್ಮ ನೆರವಿಗೆ ಬರುವಂತೆ ಅಮೆರಿಕ ಸಂಸತ್ಗೆ ಮನವಿ ಮಾಡಿದ್ದಾರೆ.
- ಯುಎಸ್ ಅಧ್ಯಕ್ಷ ಜೋ ಬೈಡನ್ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು "ಯುದ್ಧ ಅಪರಾಧಿ" ಎಂದು ಕರೆದಿದ್ದಾರೆ.
- ಉಕ್ರೇನಿಯನ್ ಬಂದರು ನಗರ ಮರಿಯುಪೋಲ್ ರಷ್ಯಾ ದಾಳಿಯಿಂದ ಇನ್ನಿಲ್ಲದಂತೆ ನೆಲಕಚ್ಚಿದೆ
- ಸೋವಿಯತ್-ಯುಗದ S-300 ವಾಯು ರಕ್ಷಣಾ ವ್ಯವಸ್ಥೆಗಳನ್ನು ಉಕ್ರೇನ್ಗೆ ವರ್ಗಾಯಿಸುವ ಬಗ್ಗೆ U.S. ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಚರ್ಚಿಸುವ ನಿರೀಕ್ಷೆಯಿದೆ.