ಕೀವ್ : ಉಕ್ರೇನ್ ಮತ್ತು ರಷ್ಯಾದ ನಡುವಿನ ಯುದ್ಧದಿಂದ ಭಾರಿ ಹಾನಿಯುಂಟಾಗಿದ್ದು, ಸಾವಿರಾರು ಅಮಾಯಕರು ಬಲಿಯಾಗಿದ್ದಾರೆ. ಇನ್ನೊಂದೆಡೆ ರಷ್ಯಾ ದಾಳಿಗೆ ಹೆದರಿ ಹಲವಾರು ಮಂದಿ ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ. ಈ ನಡುವೆ ಸಾವಿರಾರು ನಾಗರಿಕರನ್ನು ರಷ್ಯಾವು ಅಪಹರಣ ಮಾಡಿದೆ ಎಂದು ಉಕ್ರೇನ್ ಗಂಭೀರ ಆರೋಪ ಮಾಡಿದೆ. ಉಕ್ರೇನ್‌ನಿಂದ 84,000 ಮಕ್ಕಳು ಸೇರಿದಂತೆ 4,02,000 ಜನರನ್ನು ಮಾಸ್ಕೋ ಬಲವಂತವಾಗಿ ರಷ್ಯಾಕ್ಕೆ ಕರೆದೊಯ್ದಿದೆ.
ಇವರನ್ನ ಒತ್ತೆಯಾಳುಗಳಾಗಿ ಇಟ್ಟುಕೊಳ್ಳಲು ಬಳಸಿಕೊಳ್ಳಬಹುದು. ರಷ್ಯಾ ಪ್ರಮುಖವಾಗಿ ಉಕ್ರೇನ್‌ನ ಮಕ್ಕಳನ್ನು ಗುರಿಯಾಗಿಸಿಕೊಂಡಿದೆ. ಈಗಾಗಲೇ ಹಲವಾರು ಮಕ್ಕಳನ್ನು ಅಪಹರಣ ಮಾಡಿದೆ ಎಂದು ಉಕ್ರೇನ್ ಆತಂಕ ವ್ಯಕ್ತಪಡಿಸಿದೆ. ಬಂದರು ನಗರವಾದ ಬರ್ಡಿಯಾನ್ಸ್ಕ್ ಬಳಿ ರಷ್ಯಾದ ದೊಡ್ಡ ಲ್ಯಾಂಡಿಂಗ್ ಹಡಗನ್ನು ಮುಳುಗಿಸಲಾಗಿದೆ ಎಂದು ಉಕ್ರೇನ್ ನೌಕಾಪಡೆ ಹೇಳಿದೆ. ಇನ್ನೊಂದೆಡೆ ಭೀಕರ ಹೋರಾಟದ ನಂತರ ಪೂರ್ವ ಪಟ್ಟಣವಾದ ಇಝಿಯಂ ಅನ್ನು ವಶಪಡಿಸಿಕೊಂಡಿರುವುದಾಗಿ ರಷ್ಯಾ ಹೇಳಿಕೊಂಡಿದೆ.