ಕೀವ್( ಉಕ್ರೇನ್): ತಮ್ಮ ದೇಶದ ಮೇಲೆ ನಡೆಸುತ್ತಿರುವ ಯುದ್ಧ ಕುರಿತು ನಿನ್ನೆ ನಡೆದ ಸಂಧಾನದ ಮಾತುಕತೆ ವೇಳೆಯೇ ರಷ್ಯಾ ಹೆಚ್ಚಿನ ಶೆಲ್ ದಾಳಿಗಳನ್ನು ತೀವ್ರಗೊಳಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ.
ನಿನ್ನೆ ತಡರಾತ್ರಿ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಅವರು, ನಮ್ಮ ಪ್ರದೇಶ, ನಮ್ಮ ನಗರಗಳ ಮೇಲೆ ಬಾಂಬ್ ದಾಳಿ ಹಾಗೂ ಶೆಲ್ ದಾಳಿಯ ಹಿನ್ನೆಲೆಯಲ್ಲಿ ಮಾತುಕತೆಗಳು ನಡೆಯುತ್ತಿವೆ. ಸಂಧಾನ ಪ್ರಕ್ರಿಯೆಯೊಂದಿಗೆ ಒಂದು ಕಡೆ ಮಾತುಕತೆ ಮತ್ತೊಂದೆಡೆ ಶೆಲ್ ದಾಳಿ ಸ್ಪಷ್ಟವಾಗಿತ್ತು. ಈ ಸರಳ ವಿಧಾನದೊಂದಿಗೆ ನಮ್ಮ ಮೇಲೆ ರಷ್ಯಾ ಒತ್ತಡವನ್ನು ಹಾಕಲು ಪ್ರಯತ್ನಿಸುತ್ತಿದೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ.
ಕೆಲ ಗಂಟೆಗಳ ಸಂದಾನದ ಮಾತುಕತೆಗಳ ಬಗ್ಗೆ ಯಾವುದೇ ವಿವರಗಳನ್ನು ನೀಡದ ಝೆಲೆನ್ಸ್ಕಿ, ಒಂದು ಕಡೆ ರಾಕೆಟ್ ಫಿರಂಗಿಗಳಿಂದ ಹೊಡೆದಾಗ ಉಕ್ರೇನ್ ಸುಮ್ಮನೆ ಕೂರಲು ಸಿದ್ಧವಾಗಿಲ್ಲ. ರಾಜಧಾನಿಯಾದ ಕೀವ್ ರಷ್ಯಾದ ಪ್ರಮುಖ ಗುರಿಯಾಗಿ ಉಳಿದಿದೆ. ರಷ್ಯಾದ ಪಡೆಗಳು ಖಾರ್ಕೀವ್ ನಗರವನ್ನು ರಾಕೆಟ್ ಫಿರಂಗಿ, ಶೆಲ್ ದಾಳಿ ನಡೆಸಿವೆ ಎಂದು ದೂರಿದ್ದಾರೆ.