ಕೀವ್(ಉಕ್ರೇನ್): ರಷ್ಯಾದ ಆಕ್ರಮಣದ ನಂತರ ಉಕ್ರೇನ್ ರಾಷ್ಟ್ರದಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಪಲಾಯನ ಮಾಡಿದ್ದಾರೆ. ಇದು ಈ ಶತಮಾನದಲ್ಲಿ ಅತ್ಯಂತ ವೇಗದ ಪಲಾಯನ ಎಂದು ವಿಶ್ವಸಂಸ್ಥೆ ಗುರುವಾರ ಹೇಳಿದೆ.
ಇದರ ಜೊತೆಗೆ ಉಕ್ರೇನ್‌ನ ಎರಡನೇ ಅತ್ಯಂತ ದೊಡ್ಡ ನಗರವಾದ ಖಾರ್ಕಿವ್ನಲ್ಲಿ ರಷ್ಯಾ ಬಾಂಬ್ ದಾಳಿಯನ್ನು ನಡೆಸಿದೆ. ಎರಡು ಬಂದರುಗಳಿಗೆ ಮುತ್ತಿಗೆ ಹಾಕಿದೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.
ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿಯು ಪ್ರಕಾರ, ಉಕ್ರೇನ್‌ನ ಒಟ್ಟು ಜನಸಂಖ್ಯೆಯ ಶೇಕಡಾ 2ರಷ್ಟು ಮಂದಿ ಒಂದು ವಾರದೊಳಗೆ ದೇಶದಿಂದ ಹೊರಹೋಗಿದ್ದಾರೆ ಅಥವಾ ಪಲಾಯನ ಮಾಡಿದ್ದಾರೆ. ಖಾರ್ಕಿವ್ನಲ್ಲಿ ಸಾಮೂಹಿಕವಾಗಿ ಜನರು ಪಲಾಯನ ಮಾಡುತ್ತಿರುವುದು ಕಂಡುಬಂದಿದೆ. ಶೆಲ್ ಮತ್ತು ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು ಜನರು ರೈಲು ನಿಲ್ದಾಣಗಳಿಗೆ ತೆರಳುತ್ತಿದ್ದಾರೆ. ಒಮ್ಮೊಮ್ಮೆ ಅವರಿಗೂ ಎಲ್ಲಿಗೆ ತೆರಳುತ್ತಿದ್ದೇವೆ ಎಂಬುದು ಗೊತ್ತಿರುವುದಿಲ್ಲ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ವರದಿಯಲ್ಲಿ ತಿಳಿಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ಉಲ್ಲೇಖಿಸಿದೆ.
ರಾತ್ರಿಯಿಡೀ ಉಕ್ರೇನ್ ರಾಜಧಾನಿ ಕೀವ್ ಮೇಲೆ ದಾಳಿ ನಡೆಸಲಾಗಿದೆ. ಸರ್ಕಾರದ ಪ್ರಧಾನ ಕಚೇರಿಯಿಂದ ದಕ್ಷಿಣಕ್ಕೆ 7 ಕಿಲೋಮೀಟರ್ ದೂರದಲ್ಲಿರುವ ಲೈಸಾ ಹೋರಾ ಜಿಲ್ಲೆಯಲ್ಲಿ ಪ್ರಸಾರ ಕೇಂದ್ರದ ಮೇಲೆ ದಾಳಿ ನಡೆಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಆದರೆ ಈ ದಾಳಿಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ರಷ್ಯಾ ಹೇಳುತ್ತಿದೆ.
ಗೊಂದಲದಲ್ಲಿರುವ ಮಕ್ಕಳು:ಉಕ್ರೇನ್ ಸೈನಿಕರು ರಷ್ಯಾ ಸೈನಿಕರ ವಿರುದ್ಧ ಹೋರಾಡುವುದನ್ನು ಮುಂದುವರೆಸಬೇಕು. ರಷ್ಯಾ ಆಕ್ರಮಣಕಾರರು ಶಾಂತಿಯನ್ನು ಬಯಸುವುದಿಲ್ಲ. ಆಕ್ರಮಣಕಾರರು ಶಾಂತಿಯಿಂದಿರಲು ಬಿಡಬಾರದು ಎಂದಿರುವ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ಸೈನಿಕರನ್ನು'ಗೊಂದಲದಲ್ಲಿರುವ ಮಕ್ಕಳು' ಎಂದು ಹೋಲಿಕೆ ಮಾಡಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ವಿಚಾರವಾಗಿ ವೋಟಿಂಗ್ ವೇಳೆ 141 ರಾಷ್ಟ್ರಗಳು ರಷ್ಯಾ ದಾಳಿಯ ವಿರುದ್ಧ ಮತ ಚಲಾಯಿಸಿದರೆ, ಐದು ರಾಷ್ಟ್ರಗಳು ರಷ್ಯಾ ಪರವಾಗಿ ಮತ ಚಲಾಯಿಸಿವೆ. ಇನ್ನು ಭಾರತ ಸೇರಿ 35 ರಾಷ್ಟ್ರಗಳು ಮತದಾನದಿಂದ ದೂರ ಉಳಿದಿದ್ದು, ಇದಾದ ನಂತರವೂ ರಷ್ಯಾ ದಾಳಿಯನ್ನು ತೀವ್ರಗೊಳಿಸಿದೆ.
'ಯುದ್ಧಕ್ಕೆ ಹಣವಿಲ್ಲ': ರಷ್ಯಾದ ಆರ್ಥಿಕತೆಯು ಈಗಾಗಲೇ ಸಂಕಷ್ಟದಲ್ಲಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧವನ್ನು ಶೀಘ್ರವಾಗಿ ಕೊನೆಗೊಳಿಸಲು ಒಂದು ಮಾರ್ಗವನ್ನು ಕಂಡುಕೊಳ್ಳದಿದ್ದರೆ ಗಂಭೀರವಾದ ಆಂತರಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ ಎಂದು ರಷ್ಯಾ ರಕ್ಷಣಾ ಸಲಹೆಗಾರ ಫೆಲ್ಗೆನ್‌ಹೌರ್ ಹೇಳಿದ್ದಾರೆ.
ಈ ಯುದ್ಧವನ್ನು ಮುಂದುವರೆಸಲು ಹಣವಿಲ್ಲ ಎಂದಿರುವ ಫೆಲ್ಗೆನ್‌ಹೌರ್ ಈ ದಾಳಿಯನ್ನು ಆದಷ್ಟು ಬೇಗ ಮುಗಿಸದಿದ್ದರೆ, ವಿಜಯಶಾಲಿಯಾಗದಿದ್ದರೆ, ಸಂಕಷ್ಟ ಎದುರಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಂದರು ನಗರಗಳಿಗೂ ಮುತ್ತಿಗೆ:ಉಕ್ರೇನ್‌ನಾದ್ಯಂತ ಯುದ್ಧ ಮುಂದುವರೆದಿದೆ. ಅಜೋವ್ ಸಮುದ್ರದ ಬಳಿಯಿರುವ ದೊಡ್ಡ ನಗರವಾದ ಮರಿಯುಪೋಲ್ ಅನ್ನು ರಷ್ಯಾದ ಪಡೆಗಳು ಸುತ್ತುವರೆದಿದೆ ಎಂದು ಬ್ರಿಟನ್‌ನ ರಕ್ಷಣಾ ಸಚಿವಾಲಯವು ಎಂದು ಹೇಳಿದೆ. ಮತ್ತೊಂದು ಪ್ರಮುಖ ಬಂದರು ಆದ ಹಡಗು ನಿರ್ಮಾಣದ ಕೇಂದ್ರವಾದ ಕಪ್ಪು ಸಮುದ್ರದ ಬಳಿಯಿರುವ ಖೇರ್ಸನ್ ಸ್ಥಿತಿ ಈಗ ಅಸ್ಪಷ್ಟವಾಗಿದೆ.