ಲಂಡನ್(ಯುಕೆ): 12 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಯುಕೆ ಮುಖ್ಯ ವೈದ್ಯಕೀಯ ಅಧಿಕಾರಿಗಳು (ಸಿಎಂಒ) ನಿರ್ಧರಿಸಿದ್ದಾರೆ.
ಇದು ಶಾಲೆಗಳಲ್ಲಿ ಮಕ್ಕಳ ಮೇಲೆ ಯಾವ ಪರಿಣಾಮ ಬೀರುತ್ತದೆ ಮತ್ತು ಶಿಕ್ಷಣದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪರಿಗಣಿಸಿ ನಂತರ ಸರ್ಕಾರಕ್ಕೆ ತಮ್ಮ ಶಿಫಾರಸು ಮಾಡಲಾಗಿದೆ ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಆರೋಗ್ಯವಂತ ಮಕ್ಕಳಿಗೆ ಫಿಜರ್/ಬಯೋಎನ್ಟೆಕ್ ಲಸಿಕೆಯ ಒಂದೇ ಡೋಸ್ ನೀಡಬೇಕು ಮತ್ತು ಆದಷ್ಟು ಬೇಗ ಈ ಲಸಿಕೆ ಕಾರ್ಯ ಪ್ರಾರಂಭಿಸಬೇಕು. ಈ ಮೂಲಕ ಸುಮಾರು 3 ಮಿಲಿಯನ್ ಮಕ್ಕಳಿಗೆ ಮೊದಲ ಡೋಸ್ ನೀಡಬಹುದಾಗಿದೆ. ಇದನ್ನು ಶಾಲೆಗಳ ಮೂಲಕವೇ ನೀಡುವ ನಿರೀಕ್ಷೆಯಿದೆ. ಈ ಬಗ್ಗೆ ಸಿಎಂಒಗಳು ಯುಕೆ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವೇದ್ ಅವರಿಗೆ ಪತ್ರ ಬರೆದಿದ್ದಾರೆ.
ಯುಕೆ ಸಿಎಮ್‌ಒಗಳು, ಕೆನಡಾ ಮತ್ತು ಇಸ್ರೇಲ್ ಈಗಾಗಲೇ 12 ರಿಂದ 15 ವರ್ಷ ವಯಸ್ಸಿನ ಮಕ್ಕಳು ಮತ್ತು ಯುವಜನರಿಗೆ ಸಾರ್ವತ್ರಿಕವಾಗಿ ಲಸಿಕೆಗಳನ್ನು ನೀಡಿರುವುದನ್ನು ಗಮನಿಸಿದ್ದಾರೆ. ಈಗ ನಾಲ್ಕು ಯುನೈಟೆಡ್ ಕಿಂಗ್ಡಮ್ ರಾಷ್ಟ್ರಗಳಾದ ವೇಲ್ಸ್, ಸ್ಕಾಟ್ಲೆಂಡ್, ಇಂಗ್ಲೆಂಡ್ ಮತ್ತು ಉತ್ತರ ಐರ್ಲೆಂಡ್ ಇವು CMOಗಳ ಶಿಫಾರಸನ್ನು ಸ್ವೀಕರಿಸಬೇಕೆ ಬೇಡವೇ ಎಂದು ನಿರ್ಧರಿಸಬೇಕಿದೆ. ಈ ರಾಷ್ಟ್ರಗಳು ಒಪ್ಪಿದರೆ, ಮಕ್ಕಳಿಗೆ ಫೈಜರ್/ಬಯೋಟೆಕ್ ಡೋಸ್ ನೀಡಲಾಗುತ್ತದೆ.
ಲಸಿಕೆಯನ್ನು ಶಾಲೆಗಳಲ್ಲಿ ನೀಡುವ ಸಾಧ್ಯತೆಯಿದೆ ಮತ್ತು ಪೋಷಕರ ಒಪ್ಪಿಗೆ ಕೇಳಲಾಗುತ್ತದೆ ಎಂದು ಸಿಎಂಒಗಳು ತಿಳಿಸಿದ್ದಾರೆ.