ಲಂಡನ್:ಬ್ರಿಟನ್ ಹಾಲಿ ಪ್ರಧಾನಿ ಬೋರಿಸ್ ಜಾನ್ಸನ್ ಭಾರಿ ಬಹುಮತದೊಂದಿಗೆ ಮತ್ತೆ ಪ್ರಧಾನಿ ಪಟ್ಟಕ್ಕೇರಿದ್ದಾರೆ.
ಬೋರಿಸ್ ಜಾನ್ಸನ್ ನೇತೃತ್ವದ ಕನ್ಸರ್ವೇಟಿವ್ ಪಾರ್ಟಿ 2019ರ ಈ ಸಾರ್ವತ್ರಿಕ ಚುನಾವಣೆಯಲ್ಲಿ 364 ಸೀಟುಗಳಲ್ಲಿ ದಿಗ್ವಿಜಯ ಸಾಧಿಸಿದೆ. ತಮ್ಮ ಸ್ಥಾನ ಉಳಿಸಿಕೊಳ್ಳಲು 322 ಸೀಟುಗಳ ಅವಶ್ಯಕತೆ ಹೊಂದಿದ್ದ ಹಾಲಿ ಪ್ರಧಾನಿ ಜಾನ್ಸನ್ ಅದಕ್ಕೂ ಮೀರಿದ ಬೃಹತ್ ವಿಜಯ ಸಾಧಿಸಿದ್ದಾರೆ.
ಕನ್ಸರ್ವೇಟಿವ್ ಪಾರ್ಟಿಯ ಪ್ರಬಲ ಎದುರಾಳಿ ಲೇಬರ್ ಪಾರ್ಟಿ 203 ಸೀಟುಗಳಲ್ಲಿ ಜಯಿಸಿದೆ.1935ರ ಬಳಿಕ ಲೇಬರ್ ಪಾರ್ಟಿಯ ಕಳಪೆ ಚುನಾವಣೆ ಇದಾಗಿದೆ. ಇನ್ನುಳಿದಂತೆ ಸ್ಕಾಟಿಶ್ ನ್ಯಾಷನಲ್ ಪಾರ್ಟಿ 48 ಹಾಗೂ ಲಿಬರಲ್ ಡೆಮಾಕ್ರಟ್ಸ್ 11 ಸೀಟು ಸಂಪಾದಿಸಿದೆ.
650 ಸೀಟುಗಳಿರುವ ಬ್ರಿಟನ್ ಪಾರ್ಲಿಮೆಂಟಿಗೆ ಗುರುವಾರ ಮತದಾನ ನಡೆದಿತ್ತು. ಕನ್ಸರ್ವೇಟಿವ್ ಪಾರ್ಟಿ 350ಕ್ಕೂ ಅಧಿಕ ಸೀಟುಗಳಲ್ಲಿ ಗೆಲ್ಲುವ ಮೂಲಕ 1987ರ ಬಳಿಕ ಪಕ್ಷವೊಂದಕ್ಕೆ ದೊರೆತ ಅತಿದೊಡ್ಡ ಗೆಲುವು ಇದಾಗಿದೆ. 1987ರಲ್ಲಿ ಮಾರ್ಗರೆಟ್ ಥ್ಯಾಚರ್ ನೇತೃತ್ವದಲ್ಲಿ ಕನ್ಸರ್ವೇಟಿವ್ ಪಾರ್ಟಿ 376 ಸೀಟು ಗೆದ್ದು ಬೀಗಿತ್ತು.