ಇಂಗ್ಲೆಂಡ್: ಕೋಟ್ಯಂತರ ಜನರನ್ನು ಆತಂಕಕ್ಕೆ ದೂಡಿ, ಲಕ್ಷಾಂತರ ಜನರನ್ನು ಬಲಿ ಪಡೆದಿರುವ ಮಹಾಮಾರಿ ಕೋವಿಡ್ಗೆ ಬ್ರಿಟನ್ನಲ್ಲಿ ಮುಂದಿನ ವಾರದಲ್ಲೇ ಲಸಿಕೆ ಲಭ್ಯವಾಗಲಿದೆ.
ಬ್ರಿಟನ್ ಸರ್ಕಾರ ಫೈಝರ್-ಬಯೋ & ಟೆಕ್ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೊನಾ ವೈರಸ್ ಲಸಿಕೆಯ ಸಾರ್ವತ್ರಿಕ ಬಳಕೆಗೆ ಅನುಮೋದನೆ ನೀಡಿದೆ. ಈ ಮೂಲಕ ಕೊರೊನಾ ಲಸಿಕೆಯೊಂದರ ಸಾರ್ವತ್ರಿಕ ಬಳಕೆಗೆ ಒಪ್ಪಿಗೆ ನೀಡಿದ ವಿಶ್ವದ ಮೊದಲ ರಾಷ್ಟ್ರ ಎಂಬ ಖ್ಯಾತಿಗೆ ಬ್ರಿಟನ್ ಪಾತ್ರವಾಗಿದೆ.
ಲಸಿಕೆಯ ಬಳಕೆಗೆ ಹಸಿರು ನಿಶಾನೆ ತೋರಿದ ಜಗತ್ತಿನ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಬ್ರಿಟನ್ ಪಾತ್ರವಾಗಿದೆ. ಫೈಝರ್ ಬಯೋ ಟೆಕ್ನ ಲಸಿಕೆಗೆ ಅನುಮೋದನೆ ನೀಡುವಂತೆ ಮೆಡಿಸಿನ್ಸ್ ಆ್ಯಂಡ್ ಹೆಲ್ತ್ ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿ (ಎಂಹೆಚ್ಆರ್ಎ) ಮಾಡಿದ್ಧ ಶಿಫಾರಸನ್ನು ಸರ್ಕಾರ ಒಪ್ಪಿಕೊಂಡಿದ್ದು ಈ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹನ್ಕಾಕ್ ತಿಳಿಸಿದ್ದಾರೆ.
ಲಸಿಕೆ ವಿತರಣೆಗೆ ದೇಶದಲ್ಲಿ ಸುಮಾರು 50 ಆಸ್ಪತ್ರೆಗಳು ಸಿದ್ಧವಾಗಿವೆ. ಇನ್ನೂ ಹಲವೆಡೆ ಲಸಿಕೆ ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಎನ್ಹೆಚ್ಎಸ್ನ ಮುಖ್ಯ ಕಾರ್ಯ ನಿರ್ವಾಹಕ ಸರ್ ಸೈಮನ್ ಸ್ಟೀವನ್ಸ್ ತಿಳಿಸಿದ್ದಾರೆ. ಕೋವಿಡ್ ಲಸಿಕೆ ಲಭ್ಯವಿದ್ದರೂ, ಜನರು ಇನ್ನೂ ಜಾಗರೂಕತೆಯಿಂದಿರಬೇಕು ಅಂತಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಈ ಲಸಿಕೆಯನ್ನು ಮಾನವರ ಬಳಕೆಗೆ ಇನ್ನೂ ಅನುಮೋದಿಸಲಾಗಿಲ್ಲ. ಆದರೂ, ಜನತೆ ಪ್ರಾಯೋಗಿಕ ಪರೀಕ್ಷೆಗಳನ್ನು ಸ್ವೀಕರಿಸಿ ಉತ್ತಮ ಫಲಿತಾಂಶ ಕಂಡಿದ್ದಾರೆ. ವ್ಯಾಕ್ಸಿನ್ಅನ್ನು ಐಸ್ ತುಂಬಿದ ಬಾಕ್ಸ್ಗಳಲ್ಲಿ ಸಾಗಿಸಲಾಗುತ್ತಿದ್ದು, ಐದು ದಿನಗಳವರೆಗೆ ಫ್ರಿಡ್ಜ್ನಲ್ಲಿ ಸಂಗ್ರಹಿಸಿಡಬಹುದು. ಮೊದಲಿಗೆ ಈ ಲಸಿಕೆಯನ್ನು ಹೆಚ್ಚಿನ ಅಪಾಯದಲ್ಲಿರುವ ಜನರಿಗೆ, ಆರೋಗ್ಯ ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ವಿತರಿಸಲಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಆದರೆ ಭಾರತದಲ್ಲಿ ಈ ಲಸಿಕೆ ಸದ್ಯಕ್ಕಂತೂ ಲಭ್ಯವಾಗುವುದಿಲ್ಲ. ಭಾರತದಲ್ಲಿ ಫೈಝರ್ ಅಥವಾ ಅದರ ಸಹಭಾಗಿತ್ವ ಹೊಂದಿರುವ ಕಂಪೆನಿಗಳಿಗೆ ಪ್ರಯೋಗ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ ಭಾರತದಲ್ಲಿ ಈ ಲಸಿಕೆ ಬಹಳ ಬೇಗನೆ ಸಿಗುವುದು ಅನುಮಾನ.