ಲಂಡನ್(ಬ್ರಿಟನ್):ಅತ್ಯಂತ ವೇಗವಾಗಿ ಹರಡಬಲ್ಲ ಕೋವಿಡ್ ವೈರಸ್ನ ಹೊಸ ತಳಿಯಾದ ಓಮಿಕ್ರೋನ್ ಬಗ್ಗೆ ಇಂಗ್ಲೆಂಡ್ನ ವಿಜ್ಞಾನಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಇದು ಅಪಾಯಕಾರಿಯಲ್ಲ, ಲಸಿಕೆಗಳಿಂದ ಈ ವೈರಸ್ನ ತೀವ್ರತೆಯನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ ಸರ್ಕಾರದ ತುರ್ತುಸ್ಥಿತಿಗಳ ವೈಜ್ಞಾನಿಕ ಸಲಹಾ ಗುಂಪಿನ (SAGE-Scientific Advisory Group for Emergencies) ವಿಜ್ಞಾನಿ ಹಾಗೂ ಸೂಕ್ಷ್ಮ ಜೀವಶಾಸ್ತ್ರಜ್ಞ ಪ್ರೊಫೆಸರ್ ಕ್ಯಾಲಮ್ ಸೆಂಪಲ್ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಹೊಸ B.1.1.529 ರೂಪಾಂತರದ ಕುರಿತು ಸರ್ಕಾರಕ್ಕೆ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.
ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ, ಲೆಸೊಥೊ, ಎಸ್ವಟಿನಿ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಓಮಿಕ್ರೋನ್ ತಳಿ ಪತ್ತೆಯಾಗಿದ್ದು, ಈ ಆರೂ ರಾಷ್ಟ್ರಗಳ ಮೇಲೆ ಇಂಗ್ಲೆಂಡ್ ಪ್ರಯಾಣ ನಿರ್ಬಂಧ ವಿಧಿಸಿದೆ. ಈ ಹೊಸ ತಳಿಯ ಬಗ್ಗೆ ಅಲ್ಲಿನ ಆರೋಗ್ಯಾಧಿಕಾರಿಗಳು ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದಾರೆ.
ಕೆಲವರು ಹೊಸ ಓಮಿಕ್ರೋನ್ ವೈರಸ್ ಅತ್ಯಂತ ಭಯಾನಕ ತಳಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಓಮಿಕ್ರೋನ್ ವೈರಸ್ನ ತೀವ್ರತೆಯನ್ನು ಕೋವಿಡ್ ವ್ಯಾಕ್ಸಿನೇಷನ್ನಿಂದ ಪರಿಣಾಮಕಾರಿಯಾಗಿ ತಗ್ಗಿಸಬಹುದು ಎಂದು ಪ್ರೊಫೆಸರ್ ಸೆಂಪಲ್ ಬಿಬಿಸಿಗೆ ಮಾಹಿತಿ ನೀಡಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಈ ವೈರಸ್ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಇದಾದ ನಂತರ ಬೋಟ್ಸ್ವಾನಾ, ಬೆಲ್ಜಿಯಂ, ಹಾಂಗ್ ಕಾಂಗ್ ಮತ್ತು ಇಸ್ರೇಲ್ನಲ್ಲಿಯೂ ಪತ್ತೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಓಮಿಕ್ರೋನ್ ವೈರಸ್ ಹರಡುವಿಕೆಯನ್ನು ತಡೆಯಲು ದಕ್ಷಿಣ ಆಫ್ರಿಕಾದ ದೇಶಗಳ ಮೇಲೆ ಹಲವಾರು ರಾಷ್ಟ್ರಗಳು ಪ್ರಯಾಣ ನಿರ್ಬಂಧ ವಿಧಿಸಿವೆ.
ಒಂದು ವೇಳೆ ಓಮಿಕ್ರೋನ್ ವೈರಸ್ ಇಂಗ್ಲೆಂಡ್ಗೆ ಬರುವುದನ್ನು ತಡೆಯಲು ಸಾಧ್ಯವಾಗದಿದ್ದರೂ, ಸ್ವಲ್ಪ ಮಟ್ಟಿಗೆ ತಡವಾಗಿ ಬಂದರೂ, ವ್ಯಾಕ್ಸಿನೇಷನ್ ಅಭಿಯಾನ ವೇಗಗೊಂಡು ಹೆಚ್ಚಿನ ಮಂದಿ ರೋಗ ನಿರೋಧಕ ಶಕ್ತಿ ಪಡೆಯುತ್ತಾರೆ. ಇದು ವೈರಸ್ ವಿರುದ್ಧ ಹೋರಾಡಲು ಸಹಾಯಕವಾಗುತ್ತದೆ. ವಿಜ್ಞಾನಿಗಳೂ ಈ ಅವಧಿಯಲ್ಲಿ ಹೆಚ್ಚಿನ ಸಂಶೋಧನೆ ಮಾಡಬಹುದು ಎಂದು ಸೆಂಪಲ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ 'ಓಮಿಕ್ರೋನ್' ಭಯ: ದೇಶಿ ಪ್ರಯಾಣಿಕರಿಗೆ RT-PCR ಪರೀಕ್ಷೆ, ಎರಡು ಡೋಸ್ ಲಸಿಕೆ ಕಡ್ಡಾಯ