ಮರಿಯುಪೋಲ್: ಉಕ್ರೇನ್ನಲ್ಲಿ ರಷ್ಯಾ ದಾಳಿ ಮುಂದುವರೆಸಿರುವ ನಡುವೆಯೇ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ರಷ್ಯಾ ಮುತ್ತಿಗೆ ಹಾಕಿರುವ ನಗರಗಳಿಂದಲೇ ಎಂಟು ಕಾರಿಡಾರ್ಗಳ ಮೂಲಕ ಹೊಸದಾಗಿ 6 ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಉಕ್ರೇನ್ನ ಉಪ ಪ್ರಧಾನಿ ಐರಿನಾ ವೆರೆಶಚುಕ್ ತಿಳಿಸಿದ್ದಾರೆ.
ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ, ಹಲವೆಡೆ ಭೀಕರ ದಾಳಿಯನ್ನು ನಡೆಸುತ್ತಿದೆ. ಕಳೆದ ಮೂರು ವಾರಗಳಿಂದ ಮರಿಯುಪೋಲ್ ಸೇರಿ ಇತರ ನಗರಗಳನ್ನು ಮುತ್ತಿಗೆ ಹಾಕಿದೆ. ಅನೇಕ ಪ್ರದೇಶಗಳು ಜರ್ಜರಿತವಾಗಿದೆ. ಇದರಿಂದ ಜನತೆ ಜೀವ ಭಯದಲ್ಲಿದ್ದು, ರಷ್ಯಾ ಆಕ್ರಮಣದ ಮಧ್ಯೆ ಅವರನ್ನು ಸುರಕ್ಷಿತವಾಗಿ ಸ್ಥಳಾಂತರಗೊಳಿಸುವ ಕಾರ್ಯ ನಡೆಯುತ್ತಿದೆ.
ಶನಿವಾರ 6,623 ಜನರನ್ನು ಸ್ಥಳಾಂತರ ಮಾಡಲಾಗಿದೆ. ಇದರಲ್ಲಿ ಮರಿಯುಪೋಲ್ನಲ್ಲಿ ಸಿಲುಕಿದ್ದ 4,128 ಜನರನ್ನು ಝಪೊರಿಜಿಯಾಕ್ಕೆ ಸ್ಥಳಾಂತರಿಸಲಾಗಿದೆ ಎಂದು ಉಪ ಪ್ರಧಾನಿ ಐರಿನಾ ಹೇಳಿದ್ದಾರೆ. ಅಲ್ಲದೇ, ಅಕ್ರಮಕವಾಗಿ ಜನರನ್ನು ಲೆವೊಬೆರೆಜ್ನಿ ನಗರದಿಂದ ರಷ್ಯಾ ಆಕ್ರಮಣಕಾರರು ಕರೆದೊಯ್ದಿದ್ದರು. ಇದರಲ್ಲಿ ಅಂದಾಜು ಸಾವಿರಕ್ಕೂ ಹೆಚ್ಚು ಜನರಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳೇ ಇದ್ದರು ಎಂದು ತಿಳಿಸಿದ್ದಾರೆ.
ಇತ್ತ, ಉಕ್ರೇನ್ ನಿವಾಸಿಗಳನ್ನು ರಷ್ಯಾಕ್ಕೆ ಸ್ಥಳಾಂತರ ಮಾಡುವಂತೆ ರಷ್ಯಾದ ಸೈನಿಕರು ಒತ್ತಡ ಹೇರುತ್ತಿದ್ದಾರೆ ಎಂದು ಮರಿಯುಪೋಲ್ ನಗರ ಕೌನ್ಸಿಲ್ ದೂರಿದೆ. ಜತೆಗೆ ಉಕ್ಕಿನ ಕಾರ್ಖಾನೆಯನ್ನು ನಾಶ ಮಾಡಲಾಗಿದೆ. ರಷ್ಯಾ ದಾಳಿಯಲ್ಲಿ ಮಕ್ಕಳು, ವೃದ್ಧರು ಸಾಯುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:ಜೀವಕಳೆ ಕಳೆದುಕೊಂಡು ಸ್ಮಶಾನದಂತಾದ ಉಕ್ರೇನ್ ನಗರಗಳು..