ಸ್ಟಾಕ್ಹೋಂ, ಸ್ವೀಡನ್: ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದ ಸ್ವೀಡನ್ನ ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಮ್ಯಾಗ್ಡಲೇನಾ ಆಂಡರ್ಸನ್ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸ್ವೀಡನ್ನ ಸಂಸತ್ ಆದ ರಿಕ್ಸ್ಡಾಗ್ನಲ್ಲಿ ಬಜೆಟ್ ಮಸೂದೆ ಅಂಗೀಕಾರಗೊಳ್ಳದ ಕಾರಣಕ್ಕೆ ಮ್ಯಾಗ್ಡಲೇನಾ ಆಂಡರ್ಸನ್ ಅವರ ಸಮ್ಮಿಶ್ರ ಸರ್ಕಾರದ ಪಕ್ಷವಾದ ಗ್ರೀನ್ ಪಾರ್ಟಿ ಬೆಂಬಲವನ್ನು ವಾಪಸ್ ಪಡೆದಿದೆ. ಇದರಿಂದ ಮ್ಯಾಗ್ಡಲೇನಾ ಆಂಡರ್ಸನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮ್ಯಾಗ್ಡಲೇನಾ ಆಂಡರ್ಸನ್ ಒಂದು ಪಕ್ಷವು ಬೆಂಬಲವನ್ನು ಹಿಂಪಡೆದರೆ, ಸಮ್ಮಿಶ್ರ ಸರ್ಕಾರವು ರಾಜೀನಾಮೆ ನೀಡಬೇಕು, ಪ್ರಧಾನಿಯಾಗಲು ಈಗಲೂ ಸಿದ್ಧವಿದ್ದೇನೆ ಎಂದಿದ್ದಾರೆ. ಗ್ರೀನ್ ಪಾರ್ಟಿ ಕೂಡಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಮುಂದಿನ ಮತದಾನದಲ್ಲಿ ಮ್ಯಾಗ್ಡಲೇನಾ ಆಂಡರ್ಸನ್ ಪರ ನಿಲ್ಲುವುದಾಗಿ ಹೇಳಿಕೊಂಡಿದೆ.