ಫ್ಲಿಂಟ್‌ಶೈರ್:ಚುರುಕಾಗಿ ಓಡಾಡುವ ಸಣ್ಣ ದೇಹರಚನೆಯ ಪ್ರಾಣಿ ಅಳಿಲು. ಅದರಚೆಲ್ಲಾಟ ಮತ್ತು ನೋಟ ನೋಡಲು ಆಕರ್ಷಕ. ಇಂತಹ ಅಳಿಲಿಗೆ ಬ್ರಿಟನ್‌ನಲ್ಲಿ ಚುಚ್ಚುಮದ್ದು ನೀಡಿ ಕೊಲ್ಲಲಾಗಿದೆ.
ಬಕ್ಲಿ ಪಟ್ಟಣದಲ್ಲಿ ಪುಟ್ಟ ಅಳಿಲೊಂದು ಸುಮಾರು 18 ಜನರ ಮೇಲೆ ದಾಳಿ ಮಾಡಿದೆ. ಹೀಗಾಗಿ ಚುಚ್ಚುಮದ್ದು ನೀಡಿ ಮರಣಶಿಕ್ಷೆ ನೀಡಲಾಯಿತು. ಪಟ್ಟಣದ ಪಕ್ಷಿ ಪ್ರೇಮಿ ಕೊರಿನ್ನೆ ರೆನಾಲ್ಡ್ಸ್ ಎಂಬ ಮಹಿಳೆಯ ಬಳಿ ಈ ಅಳಿಲು ಪ್ರತಿದಿನ ಆಹಾರ ಅರಸಿ ಬರುತ್ತಿತ್ತಂತೆ. ಕ್ರಿಸ್ಮಸ್ ಹಬ್ಬಕ್ಕೆ ಕೆಲವು ದಿನಗಳ ಮೊದಲು ಅವರಿಗೆ ಅನಿರೀಕ್ಷಿತ ಅನುಭವ ಆಗಿದೆ. ಆಹಾರ ನೀಡುತ್ತಿದ್ದಾಗ ಅವರ ಕೈಗೆ ಇದೇ ಅಳಿಲು ಏಕಾಏಕಿ ಕಚ್ಚಿ ಗಾಯಗೊಳಿಸಿ ಪರಾರಿಯಾಗಿದೆ.
ಈ ಘಟನೆ ನಡೆದ ನಂತರ ಸಾಮಾಜಿಕ ಜಾಲತಾಣದಲ್ಲಿಯೂ ಅಳಿಲಿನ ಬಗ್ಗೆ ಬರೆದಿರುವ ಪೋಸ್ಟ್ಗಳನ್ನು ಕಂಡು ಆಕೆ ಗಾಬರಿಗೊಂಡಳು. ಅಲ್ಲಿ ಎಲ್ಲರೂ ಅಳಿಲಿನ ಉಪದ್ರವಗಳ ಬಗ್ಗೆ ಹೆಚ್ಚು ಚರ್ಚಿಸಿದ್ದರು. ಇದು ರೆನಾಲ್ಡ್ಸ್ ಆತಂಕ ಹೆಚ್ಚಿಸಿತು. ಕೆಲವರಂತೂ ಅಳಿಲನ್ನು 'ಗ್ರೆಮ್ಲಿನ್ಸ್' ಚಿತ್ರದಲ್ಲಿನ ವಿಲನ್ ಸ್ರೈಪ್ ಎಂದು ಕರೆದಿದ್ದಾರೆ.
ಜನರ ಸಮಸ್ಯೆಗಳನ್ನರಿತ ಈಕೆ ಪ್ರತಿದಿನ ಆಹಾರ ಹುಡುಕಿ ಬರುತ್ತಿದ್ದ ಅಳಿಲನ್ನು ಬಲೆ ಹಾಕಿ ಹಿಡಿದು ‘ರಾಯಲ್ ಸೊಸೈಟಿ ಫಾರ್ ದಿ ಪ್ರಿವೆನ್ಷನ್ ಆಫ್ ಕ್ರೌಲ್ಟಿ ಟು ಅನಿಮಲ್ಸ್’ ತಂಡಕ್ಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನಲ್ಲಿಟ್ಟು ದೂರದ ಕಾಡಿನಲ್ಲಿ ಬಿಡುವಂತೆ ಮನವಿ ಮಾಡಲಾಯಿತು. ಆದ್ರೆ, ಸ್ಥಳೀಯ ನ್ಯಾಯಾಲಯ ಇದಕ್ಕೆ ಒಪ್ಪಿಗೆ ನೀಡದ ಕಾರಣ ಪಶು ವೈದ್ಯರು ಚುಚ್ಚುಮದ್ದು ನೀಡಿ ದಯಾಮರಣ ಕೊಟ್ಟರು.