ಮ್ಯಾಡ್ರಿಡ್(ಸ್ಪೇನ್): ಶ್ರೀಮಂತ ರಾಷ್ಟ್ರಗಳ ಒಕ್ಕೂಟವಾದ ಯುರೋಪ್, ಕೋವಿಡ್-19 ಕಂಟಕಕ್ಕೆ ಸಿಲುಕಿ ಒದ್ದಾಡುತ್ತಿದೆ. ಪ್ರತಿನಿತ್ಯ ನೂರಾರು ಸಾವು-ನೋವು ಸಂಭವಿಸುತ್ತಿದ್ದರೂ, ವೈರಸ್ ನಿಯಂತ್ರಣಕ್ಕೆ ಬಾರದೆ ಸರ್ಕಾರ ಕೈ ಚೆಲ್ಲಿ ಕೂತಿದೆ.
ಇಟಲಿಯಲ್ಲಿ ಕೊರೊನಾ ಸಾವಿನ ನಾಗಾಲೋಟ ಮುಂದುವರಿದಿದ್ದು, ಈವರೆಗೆ 15,362ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಇಟಲಿ ಅಗ್ರಸ್ಥಾನದಲ್ಲಿದೆ.
ಕೊರೊನಾ ಸಾವಿನಲ್ಲಿ ಐದಂಕಿ ದಾಟಿದ ಎರಡನೇ ದೇಶ ಸ್ಪೇನ್. ಇಲ್ಲಿ ಈವರೆಗೆ 11,947 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 1,26,168ಕ್ಕೂ ಹೆಚ್ಚು ಜನರಿಗೆ ಸೋಂಕು ಬಾಧಿಸಿದೆ. ಆದರೆ ಸ್ಪೇನ್ ಸರ್ಕಾರ ಹೇಳುವ ಪ್ರಕಾರ ಇಲ್ಲಿ ಇತ್ತೀಚೆಗೆ ದೇಶದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆಯಂತೆ. ಕಳೆದ 24 ಗಂಟೆಯೊಳಗೆ ಇಲ್ಲಿ 809 ಜನ ಸಾವನ್ನಪ್ಪಿದ್ದಾರೆ. ಆದರೆ ಮಾರ್ಚ್ 26ರ ಬಳಿಕ ದೇಶದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆಯ ಏರಿಕೆ ಪ್ರಮಾಣ ಕಡಿಮೆಯಾಗಿದೆಯಂತೆ. ಅಂದರೆ ಮಾರ್ಚ್ 26ರಿಂದ 7.3 ಪ್ರತಿಶತ ಪ್ರಮಾಣದ ಏರಿಕೆ ಆಗಿದ್ದು, ಇದು ಕಡಿಮೆ ಏರಿಕೆಯನ್ನು ಸೂಚಿಸುತ್ತದೆ ಎಂದು ಸರ್ಕಾರ ಹೇಳಿದೆ.
ಫ್ರಾನ್ಸ್ನಲ್ಲಿ 7,560 ಜನ ಸಾವನ್ನಪ್ಪಿದ್ದು, ಸುಮಾರು 90,000 ಜನರಿಗೆ ಸೋಂಕು ಬಾಧಿಸಿದೆ. ಜಮರ್ನಿಯಲ್ಲೂ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು, ಈವರೆಗೆ 96,000ಕ್ಕೂ ಹೆಚ್ಚು ಜನರಿಗೆ ಸೋಂಕು ಬಾಧಿಸಿದೆ. 1,400ಕ್ಕೂ ಹೆಚ್ಚು ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ.