ಲಂಡನ್: ಹೆಚ್‌ಐವಿಯಿಂದ ಗುಣಮುಖನಾದ ಪ್ರಪಂಚದ ಎರಡನೇ ವ್ಯಕ್ತಿ ತನ್ನ ಗುರುತನ್ನು ಬಹಿರಂಗಪಡಿಸಿದ್ದು, ‘ನಾನು ಭರವಸೆಯ ರಾಯಭಾರಿಯಾಗಲು ಬಯಸುತ್ತೇನೆ' ಎಂದು ಹೇಳಿದ್ದಾನೆ.
ತಿಮೋತಿ ಬ್ರೌನ್, ಬರ್ಲಿನ್ ಮೂಲದ ರೋಗಿಯು ಏಡ್ಸ್ನಿಂದ ಗುಣಮುಖರಾದ ಮೊದಲ ವ್ಯಕ್ತಿಯಾಗಿದ್ದರೆ, ಆ್ಯಡಮ್ ಕ್ಯಾಸ್ಟಿಲ್ಲೆಜೊ (40), ಲಂಡನ್ ಮೂಲದ ವ್ಯಕ್ತಿಯೂ ಹೆಚ್‌ಐವಿಯಿಂದ ಸಂಪೂರ್ಣ ಗುಣಮುಖನಾಗಿ ಕಳೆದ ವರ್ಷ ಹೆಚ್ಐವಿ ಮುಕ್ತವಾಗಿದ್ದನು.
ಸೋಮವಾರ ನ್ಯೂಯಾರ್ಕ್ ಟೈಮ್ಸ್ಗೆ ನೀಡಿರುವ ಸಂದರ್ಶನದಲ್ಲಿ ತಾನು 2003 ರಿಂದ ಹೆಚ್‌ಐವಿ ಸೋಂಕಿನಿಂದ ಬಳಲುತ್ತಿದ್ದೆನು. ಅಲ್ಲದೇ 2012 ರಲ್ಲಿ ರಕ್ತ ಕ್ಯಾನ್ಸರ್ ಇರುವುದು ಕೂಡ ದೃಢಪಟ್ಟಿತ್ತು. ಮೂಳೆ ಮಜ್ಜೆ ಕಸಿ ಸೇರಿದಂತೆ ಅನೇಕ ಚಿಕಿತ್ಸೆಗೆ ಒಳಗಾಗಿ ಇದೀಗ ಕಳೆದ ವರ್ಷ ನಾನು ಹೆಚ್‌ಐವಿಯಿಂದ ಮುಕ್ತಿ ಪಡೆದೆನು ಎಂದು ತನ್ನ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಹೆಚ್‌ಐವಿ ಬಾಧಿತರು ತಮ್ಮನ್ನು ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಬಯಸುವುದಿಲ್ಲ. ಆದರೆ ಆ್ಯಡಮ್ ಕ್ಯಾಸ್ಟಿಲ್ಲೆಜೊ ಮಾತ್ರ ಜನರ ಮುಂದೆ ಬಂದು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಧೈರ್ಯ ತುಂಬಲು ಬಯಸಿದ್ದಾರೆ. ‘ನಾನು ಭರವಸೆಯ ರಾಯಭಾರಿಯಾಗಲು ಬಯಸುತ್ತೇನೆ' ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ.