ದಾವೋಸ್(ಸ್ವಿಟ್ಜರ್ಲೆಂಡ್):ಜಗತ್ತಿನಾದ್ಯಂತ 1 ಟ್ರಿಲಿಯನ್ ಮರಗನ್ನು ನೆಟ್ಟು ಸಾಧಿಸುತ್ತೇವೆಂದುಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು,ಮುಂದಿನ 10 ವರ್ಷಗಳಲ್ಲಿ ಜಗತ್ತಿನಾದ್ಯಂತ ಒಂದು ಟ್ರಿಲಿಯನ್ ಮರಗಳನ್ನು ನೆಡುವ ಉದ್ದೇಶವನ್ನು ಈ ವೇದಿಕೆ ಹೊಂದಿದೆ. ಸದ್ಗುರು ಜಾಗತಿಕ ಪರಿಸರದ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿ, ಮರಗಳ ಸಂಖ್ಯೆ ಕಡಿಮೆಯಾಗಿದೆ ಎಂದರು. ಹಾಗೆ ರೈತರ ಏಳಿಗೆ ಕುರಿತಾಗಿಯೂ ಮಾತನಾಡಿದರು.
ಅಕ್ರಮ ಮರಗಳ ವ್ಯಾಪಾರವಾಗುತ್ತಿದ್ದು, ಇದು ಬದಲಾಗಬೇಕಿದೆಯೆಂದರು. ಕಾನೂನು ಬಾಹಿರ ಮರಗಳ ವ್ಯಾಪಾರ ಸ್ಥಗಿತಗೊಳ್ಳಬೇಕು, ಇದು ಆರ್ಥಿಕ ಪ್ರಕ್ರಿಯೆಯಾಗಬೇಕು ಎಂದು ಹೇಳಿದರು. ಅಕ್ರಮ ವ್ಯಾಪಾರವನ್ನು ತಡೆಯುವ ಏಕೈಕ ಮಾರ್ಗವೆಂದರೆ ಮರವನ್ನು ಕೃಷಿ ಉತ್ಪನ್ನವನ್ನಾಗಿ ಮಾಡುವುದು ಮತ್ತು ರೈತರಿಗೆ ಬೆಳೆಯಲು ಅವಕಾಶ ಮಾಡಿಕೊಡುವುದೆಂದು ಪ್ರತಿಪಾದಿಸಿದರು.
ಭಾರತೀಯರು ವಲಸೆ ಹೋಗುತ್ತಿರುವುದು ವಿಷಾದಕರ ಸಂಗತಿ. ಗ್ರಾಮೀಣ ಸಮುದಾಯಗಳನ್ನು ಅಭಿವೃದ್ಧಿಪಡಿಸುವುದು, ಅವರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವ ಮೂಲಕ ವಲಸೆ ತಡೆಯಬಹುದಾಗಿದೆ ಎಂದು ಸದ್ಗುರು ಅಭಿಪ್ರಾಯಪಟ್ಟರು.
ಪ್ರಶಸ್ತಿ ವಿಜೇತ ಯೋಜನೆಗಳಾದ ಪ್ರಾಜೆಕ್ಟ್ ಗ್ರೀನ್‌ಹ್ಯಾಂಡ್ಸ್ (ಪಿಜಿಹೆಚ್) ಮತ್ತು ರ್ಯಾಲಿ ಫಾರ್ ರಿವರ್ಸ್ (ಆರ್‌ಎಫ್‌ಆರ್) ಸೇರಿದಂತೆ ಪರಿಸರ ಸಂಬಂಧ ಯೋಜನೆಗಳನ್ನು ಪ್ರಾರಂಭಿಸಿದ್ದು, ಸದ್ಗುರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ.