ಮಾಸ್ಕೋ: ಮೂರನೇ ಕ್ಲಿನಿಕಲ್ ಟ್ರಯಲ್ ಬಾಕಿ ಇರುವಾಗಲೇ ಮಹಾಮಾರಿ ಕೋವಿಡ್ಗೆ ಲಸಿಕೆ ಕಂಡು ಹಿಡಿದಿರುವುದಾಗಿ ರಷ್ಯಾ ಅಧಿಕೃತವಾಗಿ ಘೋಷಿಸಿಕೊಂಡಿದೆ. ಇದು ರಷ್ಯಾ ಸೇರಿ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ರಷ್ಯಾ ಆರೋಗ್ಯ ಸಚಿವಾಲಯದ ನೀತಿ ಮಂಡಳಿಯ ಸದಸ್ಯತ್ವಕ್ಕೆ ಶ್ವಾಸಕೋಶ ಸಂಬಂಧಿ ತಜ್ಞ ವೈದ್ಯರೊಬ್ಬರು ರಾಜೀನಾಮೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ.
ಪ್ರೊಫೆಸರ್ ಅಲೆಗ್ಸಾಂಡರ್ ಚುಚಾಲಿನ್ ಅವರು ರಾಜೀನಾಮೆಗೂ ಮುನ್ನ ಸುರಕ್ಷತೆಯ ನೆಲೆಯಲ್ಲಿ ಕೋವಿಡ್ ಲಸಿಕೆಯನ್ನು ನೋಂದಣಿ ಮಾಡುವುದಕ್ಕೆ ವಿರೋಧಿಸಿದ್ದರು ಎಂದು ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ.
ಇನ್ನು, ಮಂಗಳವಾರವಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕೋವಿಡ್ಗೆ ಲಸಿಕೆ ಕಂಡು ಹಿಡಿದ ಮೊದಲ ದೇಶ ನಮ್ಮದು ಎಂದು ಘೋಷಿಸಿದ್ದರು. ಬಳಿಕ ರಷ್ಯಾ ಆರೋಗ್ಯ ಸಚಿವ ಮಿಖೈಲ್ ಅವರು, ಎರಡು ವಾರಗಳಲ್ಲಿ ಲಸಿಕೆ ಉತ್ಪಾದನೆ ಆರಂಭಿಸುತ್ತೇವೆ ಎಂದು ಹೇಳದ್ದರು.
ಆ ಬಳಿಕ ಲಸಿಕೆ ಬಗ್ಗೆ ರಷ್ಯಾದಲ್ಲೇ ಭಿನ್ನ ಮಾತುಗಳು ಕೇಳಿಬಂದಿದ್ದವು. ಹಾಗೆಯೇ ಲಸಿಕೆಯ ಪರಿಣಾಮದ ಬಗ್ಗೆ ತಮಗೆ ಸರಿಯಾದ ಮಾಹಿತಿ ಇಲ್ಲ ಎಂದು ಸ್ವತಃ ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೊಂಡಿತ್ತು.
ಚುಚಾಲಿನ್ ರಾಜೀನಾಮೆಗೂ ಮುನ್ನ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, ಯಾವುದೇ ಲಸಿಕೆ ಅಥವಾ ಔಷಧ ನೋಂದಣಿ ಮಾಡುವ ಮುನ್ನ ಸುರಕ್ಷತೆಯ ಬಗ್ಗೆ ಮಹತ್ವ ಕೊಡಬೇಕು ಎಂದು ಒತ್ತಿ ಹೇಳಿದ್ದರು. ಬಳಿಕ ರಾಜೀನಾಮೆ ಸಲ್ಲಿಸಿರುವುದು ಲಸಿಕೆ ಮೇಲಿನ ಅನುಮಾನವನ್ನು ಹೆಚ್ಚಿಸಿದೆ.