ಲಂಡನ್:ಉಕ್ರೇನ್ ಮೇಲಿನ ರಷ್ಯಾ ದಾಳಿಗೆ ಸ್ವದೇಶಿಯರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ರಷ್ಯಾದ ಟೆನಿಸ್ ಆಟಗಾರ್ತಿ ಅನಸ್ತಾಸಿಯಾ ಪಾವ್ಲ್ಯುಚೆಂಕೋವಾ 'ಉಕ್ರೇನ್ ಮೇಲಿನ ಆಕ್ರಮಣವನ್ನು ತಕ್ಷಣವೇ ಕೊನೆಗೊಳಿಸಿ, ಶಾಂತಿ ಕಾಪಾಡಿ' ಎಂದು ಕರೆ ನೀಡಿದ್ದಾರೆ.
ಉಭಯ ದೇಶಗಳ ಮಧ್ಯೆ ನಡೆಯುತ್ತಿರುವ ಯುದ್ಧವನ್ನು ವಿರೋಧಿಸಿ ತಮ್ಮ ಟ್ವಿಟರ್ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಅವರು, "ನಾನು ಬಾಲ್ಯದಿಂದಲೂ ಟೆನಿಸ್ ಆಡುತ್ತಿದ್ದೇನೆ. ನನ್ನ ಜೀವನದುದ್ದಕ್ಕೂ ನಾನು ರಷ್ಯಾ ಪ್ರತಿನಿಧಿಸುತ್ತೇನೆ. ಆದರೆ, ಯುದ್ಧದ ಆರಂಭದ ಬಳಿಕ ನನ್ನ ಕುಟುಂಬ, ಸ್ನೇಹಿತರು ಭಯಪಟ್ಟಂತೆ ನಾನೂ ಕೂಡ ಭೀತಿಯಲ್ಲಿದ್ದೇನೆ. ವೈಯಕ್ತಿಕ ಮಹತ್ವಾಕಾಂಕ್ಷೆ, ರಾಜಕೀಯಕ್ಕಾಗಿ ಹಿಂಸಾಚಾರ ನಡೆಸುವುದನ್ನು ನಾನು ಬೆಂಬಲಿಸುವುದಿಲ್ಲ ಎಂದು ದೃಢವಾಗಿ ಹೇಳಿದ್ದಾರೆ.
ನನ್ನ ನಿಲುವನ್ನು ಸ್ಪಷ್ಟವಾಗಿ ಹೇಳಲು ನಾನು ಹೆದರುವುದಿಲ್ಲ. ನಾನು ಯುದ್ಧ ಮತ್ತು ಹಿಂಸಾಚಾರಕ್ಕೆ ವಿರುದ್ಧವಾಗಿದ್ದೇನೆ. ವೈಯಕ್ತಿಕ ಮಹತ್ವಾಕಾಂಕ್ಷೆಗಳು ಅಥವಾ ರಾಜಕೀಯ ಉದ್ದೇಶಗಳು ಹಿಂಸಾತ್ಮಕ ರೂಪ ಪಡೆಯಬಾರದು. ಇದು ನಮ್ಮ ಮತ್ತು ಮುಂದಿನ ಪೀಳಿಗೆಗೆ ಮಾರಕವಾಗಲಿದೆ ಎಂದಿದ್ದಾರೆ.