ಮಾಸ್ಕೋ,ರಷ್ಯಾ :ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದ ಕೆಲವೇ ಗಂಟೆಗಳಲ್ಲಿ ವಿಶ್ವದಾದ್ಯಂತ ಹಲವು ರಾಷ್ಟ್ರಗಳು ರಷ್ಯಾ ನಡೆಗೆ ಖಂಡನೆ ವ್ಯಕ್ತಪಡಿಸಿವೆ.
ಬೇರೆ ಬೇರೆ ರಾಷ್ಟ್ರಗಳು ಮಾತ್ರವಲ್ಲದೇ ರಷ್ಯಾದೊಳಗೇ, ರಷ್ಯಾದ ಜನರೇ ಪುಟಿನ್ ಮತ್ತು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಬೀದಿಗೆ ಇಳಿದಿದ್ದಾರೆ.
ಗುರುವಾರ ಸಂಜೆ ಮಾಸ್ಕೋ ನಗರದ ಮಧ್ಯಭಾಗದಲ್ಲಿ 1,000ಕ್ಕೂ ಹೆಚ್ಚು ಜನರು 'ಯುದ್ಧ ಬೇಡ' ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಸೇಂಟ್ ಪೀಟರ್ಸ್‌ಬರ್ಗ್ ಹೊರವಲಯದಲ್ಲಿರುವ ಗೋಸ್ಟಿನಿ ಡ್ವೋರ್ ಶಾಪಿಂಗ್ ಆರ್ಕೇಡ್ ಬಳಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪೊಲೀಸ್ ಬಿಗಿ ಬಂದೋಬಸ್ತ್ ಇದ್ದ ಕಾರಣದಿಂದಾಗಿ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಏರ್ಪಟ್ಟಿತ್ತು.
ಪುಟಿನ್ ಸರ್ಕಾರದ ವಿರುದ್ಧ ಪ್ರತಿಭಟನೆ ಕೇವಲ ಒಂದೆರೆಡು ನಗರಗಳಿಗೆ ಮಾತ್ರ ಸೀಮಿತವಾಗದೇ, ರಷ್ಯಾದ ಸುಮಾರು 54 ನಗರಗಳಲ್ಲಿ ನಡೆಯಿತು. ಈ ಹಿನ್ನೆಲೆಯಲ್ಲಿ ಸುಮಾರು 1,745 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಮಾಸ್ಕೋ ನಗರದಲ್ಲಿ ಒಂದರಲ್ಲೇ ಕನಿಷ್ಠ 957 ಮಂದಿಯನ್ನು ಬಂಧಿಸಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.