ಎಲ್ವಿವ್: ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿರುವ ರಷ್ಯಾ 20ನೇ ದಿನವಾದ ನಿನ್ನೆ ರಾತ್ರಿ ಮತ್ತೊಂದು ಭೀಕರ ದಾಳಿಯಲ್ಲಿ ಬಂದರು ನಗರಿ ಮರಿಯುಪೋಲ್‌ನಲ್ಲಿರುವ ಆಸ್ಪತ್ರೆಯನ್ನು ವಶಪಡಿಸಿಕೊಂಡಿವೆ. ಸುಮಾರು 500 ಜನರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿದೆ ಎಂದು ಅಲ್ಲಿನ ಪ್ರಾದೇಶಿಕ ನಾಯಕ ಪಾವ್ಲೊ ಕಿರಿಲೆಂಕೊ ಆರೋಪಿಸಿದ್ದಾರೆ.
ಮರಿಯುಪೋನಲ್ಲಿ ರಷ್ಯಾ ಸೈನಿಕರು ಹಲವು ಮನೆಗಳಿಂದ 400 ಜನರನ್ನು ಪ್ರಾದೇಶಿಕ ತೀವ್ರ ನಿಗಾ ಆಸ್ಪತ್ರೆಗೆ ಓಡಿಸಿದ್ದಾರೆ. ಸುಮಾರು 100 ವೈದ್ಯರು ಮತ್ತು ರೋಗಿಗಳು ಸಹ ಒಳಗೆ ಇದ್ದಾರೆ ಎಂದು ಕಿರಿಲೆಂಕೂ ಟೆಲಿಗ್ರಾಮ್ ಮೂಲಕ ಸಂದೇಶ ರವಾನಿಸಿದ್ದಾರೆ.
ಪುಟಿನ್ ಪಡೆಗಳು ಆಸ್ಪತ್ರೆಯ ಒಳಗಿರುವವರನ್ನು ಮಾನವ ಗುರಾಣಿಯಾಗಿ ಬಳಸುತ್ತಿವೆ. ಯಾರನ್ನೂ ಹೊರಗಡೆ ಬಿಡುತ್ತಿಲ್ಲ. ಆಸ್ಪತ್ರೆಯಿಂದ ಹೊರಹೋಗುವುದು ಅಸಾಧ್ಯವಾಗಿದ್ದು, ಭಾರಿ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಆಸ್ಪತ್ರೆಯ ಮುಖ್ಯ ಕಟ್ಟಡವು ಶೆಲ್ ದಾಳಿಯಿಂದ ಹೆಚ್ಚು ಹಾನಿಗೊಳಗಾಗಿದೆ. ಆದರೆ, ವೈದ್ಯಕೀಯ ಸಿಬ್ಬಂದಿ ನೆಲಮಾಳಿಗೆಯಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ವಾರ್ಡ್‌ಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಮುಂದುವರೆಸಿದ್ದಾರೆ. ಈ ಯುದ್ಧದ ನಿಯಮಗಳು ಮತ್ತು ಸಂಪ್ರದಾಯಗಳ ಸಂಪೂರ್ಣ ಉಲ್ಲಂಘನೆ, ಮಾನವೀಯತೆಯ ವಿರುದ್ಧದ ಘೋರ ಅಪರಾಧಗಳ ಬಗ್ಗೆ ಜಗತ್ತು ಧ್ವನಿ ಎತ್ತಬೇಕು ಎಂದು ಕೋರಿದರು.