ಕೀವ್(ಉಕ್ರೇನ್):ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಏಳನೇ ದಿನವೂ ಮುಂದುವರೆದಿದೆ. ರಷ್ಯಾದ ದಾಳಿಯ ತೀವ್ರತೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಈಗಾಗಲೇ ಪ್ರಮುಖ ನಗರಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈವರೆಗೆ ಸುಮಾರು 2 ಸಾವಿರ ಮಂದಿ ಉಕ್ರೇನ್ ನಾಗರಿಕರು ರಷ್ಯಾದ ದಾಳಿಯಲ್ಲಿ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಸರ್ಕಾರ ಹೇಳಿಕೊಂಡಿದೆ.
ಉಕ್ರೇನ್ನಾದ್ಯಂತ ಸುಮಾರು 416 ಸ್ಫೋಟಕಗಳನ್ನು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವರು ನಿಷ್ಕ್ರಿಯಗೊಳಿಸಿದ್ದಾರೆ. ವಸತಿ ಕಟ್ಟಡಗಳು, ಆಸ್ಪತ್ರೆಗಳು, ಶಾಲೆಗಳನ್ನು ರಷ್ಯಾ ಗುರಿಯಾಗಿಸಿದೆ ಎಂದು ಉಕ್ರೇನ್‌ನ ಎಮರ್ಜೆನ್ಸೀಸ್ ಸರ್ವೀಸ್ ಮಾಹಿತಿ ನೀಡಿದೆ.
ಉಕ್ರೇನ್ನಾದ್ಯಂತ ದಾಳಿ ಮುಂದುವರೆಸಲಾಗಿದ್ದು, ರಷ್ಯಾ ರಕ್ಷಣಾ ಇಲಾಖೆ ವಿಡಿಯೋವೊಂದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದೆ. ರಷ್ಯಾದ ವಾಯುಪಡೆಗಳ ಕಾರ್ಯಾಚರಣೆಯ ವಿಡಿಯೋ ಇದಾಗಿದ್ದು, ದಾಳಿಯ ತೀವ್ರತೆಯನ್ನು ವಿಡಿಯೋ ಬಿಚ್ಚಿಡುತ್ತದೆ.