ಉಕ್ರೇನ್-ರಷ್ಯಾ ಯುದ್ಧವನ್ನು ಭಾರತ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಒತ್ತಡ, ಮನವಿಗಳಿಗೆ ಮಣಿಯದೆ ದೇಶದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜಾಗರೂಕತೆಯಿಂದ ನಡೆದುಕೊಳ್ಳುತ್ತಿದೆ. ಆದ್ದರಿಂದಲೇ ರಷ್ಯಾ ವಿರುದ್ಧ ವಿಶ್ವಸಂಸ್ಥೆಯ ನಿರ್ಣಯಗಳ ಮೇಲಿನ ಮತದಾನದಿಂದ ಭಾರತ ದೂರ ಉಳಿದಿದೆ.
ಮಾಸ್ಕೋ ಜೊತೆಗಿನ ಸುದೀರ್ಘಕಾಲದ ಅತ್ಯಂತ ಆತ್ಮೀಯ ಗೆಳೆತನವನ್ನು ಮುರಿದುಕೊಳ್ಳಲು ಯಾವುದೇ ಸನ್ನಿವೇಶದಲ್ಲೂ ಇಚ್ಛಿಸದ ಭಾರತ, ಶಾಂತಿ ಮಾತುಕತೆಯೇ ಸಮಸ್ಯೆಗೆ ಪರಿಹಾರ ಎಂದು ಪುನರುಚ್ಛರಿಸಿದೆ.
1. ಭಾರತಕ್ಕೆ ಶೇ.70ರಷ್ಟು ಶಸ್ತ್ರಾಸ್ತ್ರಗಳ ಪೂರೈಕೆದಾರ ರಷ್ಯಾ:ಭಾರತವು ರಷ್ಯಾದೊಂದಿಗೆ ಬಹಳ ಹಿಂದಿನಿಂದಲೂ ಉತ್ತಮ ರಾಜತಾಂತ್ರಿಕ, ಆರ್ಥಿಕ ಸಂಬಂಧವನ್ನು ಹೊಂದಿದೆ. ಸೇನೆ, ಶಸ್ತ್ರಾಸ್ತ್ರ, ವ್ಯಾಪಾರ ಸಂಬಂಧಗಳ ವಿಷಯದಲ್ಲಿ ರಷ್ಯಾ ಹಲವು ವರ್ಷಗಳಿಂದ ಭಾರತದ ಉತ್ತಮ ಮಿತ್ರರಾಷ್ಟ್ರವಾಗಿದೆ. ಭಾರತಕ್ಕೆ ರಕ್ಷಣಾ ಮತ್ತು ಶಸ್ತ್ರಾಸ್ತ್ರಗಳ ಅತಿದೊಡ್ಡ ಪೂರೈಕೆದಾರ ದೇಶ ರಷ್ಯಾ ಎನ್ನುವುದು ದೇಶದ ಬಹುತೇಕರಿಗೆ ಗೊತ್ತಿರದ ಸಂಗತಿಯೇನಲ್ಲ.
ಭಾರತ ರಷ್ಯಾದಿಂದ ಅತ್ಯಾಧುನಿಕ ಫೈಟರ್ ಜೆಟ್‌ಗಳು, ಜಲಾಂತರ್ಗಾಮಿಗಳು ಹಾಗೂ 1,300ಕ್ಕೂ ಹೆಚ್ಚು T-90 ಟ್ಯಾಂಕ್‌ಗಳನ್ನು ಖರೀದಿಸಿದೆ. ಅಮೆರಿಕದ ಒತ್ತಡದ ನಡುವೆಯೂ ರಷ್ಯಾದಿಂದ ಅತ್ಯಾಧುನಿಕ ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಖರೀದಿಸುತ್ತಿದೆ. ಈ ಬಗ್ಗೆ 2018ರಲ್ಲಿ $5 ಬಿಲಿಯನ್ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿದ್ದವು. ಭಾರತ ತನ್ನ ಶೇ.70ರಷ್ಟು ಶಸ್ತ್ರಾಸ್ತ್ರಗಳನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತದೆ.
ಸದ್ಯದ ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಒತ್ತಡದಿಂದ ಭಾರತ ರಷ್ಯಾ ಮೇಲೆ ನಿರ್ಬಂಧ ಹೇರಿದರೆ ರಕ್ಷಣಾ ಉಪಕರಣಗಳ ನಿರ್ವಹಣೆ ಕಷ್ಟವಾಗಲಿದೆ. ಈ ಶಸ್ತ್ರಾಸ್ತ್ರಗಳ ನಿರ್ವಹಣೆಯಲ್ಲಿ ದೇಶಿ ಜ್ಞಾನವನ್ನು ಪಡೆಯಲು ಭಾರತಕ್ಕೆ ದಶಕಗಳೇ ಬೇಕು.