ರಷ್ಯಾ-ಉಕ್ರೇನ್ ಯುದ್ಧ : ಈವರೆಗಿನ ಟಾಪ್ 10 ಘಟನೆಗಳು.. - ರಷ್ಯಾ - ಉಕ್ರೇನ್ ಯುದ್ಧದ ಟಾಪ್ 10 ಸುದ್ದಿ
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. ಮೂರನೇ ದಿನಕ್ಕೆ ಯುದ್ಧ ಕಾಲಿಟ್ಟಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಹತ್ತು ಘಟನೆಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ..
ರಷ್ಯಾ-ಉಕ್ರೇನ್ ಯುದ್ಧ: ಈವರೆಗಿನ ಟಾಪ್ 10 ಘಟನೆಗಳು..
ರಷ್ಯಾ ದೇಶವು ಉಕ್ರೇನ್ ಮೇಲೆ ದಾಳಿ ನಡೆಸಿದಾಗಿನಿಂದ ದಾಳಿ-ಪ್ರತಿದಾಳಿಗಳು ನಡೆಯುತ್ತಿವೆ. ಉಕ್ರೇನ್ ಕೂಡ ತೀವ್ರ ಪ್ರತಿರೋಧ ತೋರುತ್ತಿದೆ. ಇಂದು ಕೂಡ ಬಾಂಬ್, ಮಿಸೈಲ್ ದಾಳಿಗಳಿಗೆ ಉಕ್ರೇನ್ನ ಪ್ರಮುಖ ನಗರಗಳು ತತ್ತರಿಸಿವೆ. ಇದರ ಜೊತೆಗೆ ಯುದ್ಧಕ್ಕೆ ಸಂಬಂಧಿಸಿದಂತೆ ಪ್ರಮುಖ ಘಟನೆಗಳು ನಡೆದಿದ್ದು, ಪ್ರಮುಖ 10 ಘಟನೆಗಳು ಇಲ್ಲಿವೆ.
- ಅಮೆರಿಕ ರಷ್ಯಾದ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ 'ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ'ದ ವಿಚಾರದಲ್ಲಿನ ಸಹಕಾರವನ್ನು ಹಿಂಪಡೆಯಲಾಗುತ್ತದೆ ಎಂದು ರಷ್ಯಾ ಬಾಹ್ಯಾಕಾಶ ಏಜೆನ್ಸಿಯ ಮುಖ್ಯಸ್ಥರು ಅಮೆರಿಕವನ್ನು ಒತ್ತಾಯಿಸಿದ್ದಾರೆ.
- ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಆಕ್ರಮಣವನ್ನು ವಿಶ್ವಸಂಸ್ಥೆಯಲ್ಲಿ ಭದ್ರತಾ ಮಂಡಳಿಯಲ್ಲಿ ಖಂಡಿಸಲು ನಿರ್ಣಯವನ್ನು ಮಂಡಿಸಲಾಗಿದ್ದು, ಭಾರತ ಈ ನಿರ್ಣಯದಲ್ಲಿ ಮತದಾನ ಮಾಡುವುದರಿಂದ ದೂರ ಉಳಿದಿದೆ. ಚೀನಾ ಮತ್ತು ಯುಎಇ ರಾಷ್ಟ್ರಗಳೂ ಮತದಾನಕ್ಕೆ ಗೈರಾಗಿವೆ.
- ಉಕ್ರೇನ್ ಮೇಲೆ ಆಕ್ರಮಣ ನಡೆಸುತ್ತಿರುವ ರಷ್ಯಾ ಮೇಲೆ ಅನೇಕ ರಾಷ್ಟ್ರಗಳು ನಿರ್ಬಂಧ ವಿಧಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರ ಆಸ್ತಿಗಳನ್ನು ಫ್ರೀಜ್ ಮಾಡಲು ಅಮೆರಿಕದ ಅಧ್ಯಕ್ಷ ಬೈಡನ್ ಸರ್ಕಾರ ನಿರ್ಧಾರ ಕೈಗೊಂಡಿದೆ.
- ಸ್ವೀಡನ್ ಮತ್ತು ಫಿನ್‌ಲ್ಯಾಂಡ್ ರಾಷ್ಟ್ರಗಳು ನ್ಯಾಟೋಗೆ ಸೇರಲು ಉದ್ದೇಶಿಸಿದ್ದರೆ ಗಂಭೀರವಾದ ಮಿಲಿಟರಿ ಮತ್ತು ರಾಜಕೀಯ ಪರಿಣಾಮಗಳನ್ನು ಆ ದೇಶಗಳು ಎದುರಿಸಬೇಕಾಗುತ್ತದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರಾದ ಮಾರಿಯಾ ಜಖರೋವಾ ಎಚ್ಚರಿಕೆ ನೀಡಿದ್ದಾರೆ.
- ರಷ್ಯಾದ ಎರಡು ಕ್ಷಿಪಣಿಗಳು ಉಕ್ರೇನ್ನ ರಾಜಧಾನಿ ಕೀವ್ನಲ್ಲಿನ ವಸತಿ ಸಮುಚ್ಚಯಗಳ ಮೇಲೆ ದಾಳಿ ನಡೆಸಿದೆ. ಒಂದು ಕ್ಷಿಪಣಿ ಜುಲ್ಯಾನಿ ವಿಮಾನ ನಿಲ್ದಾಣದ ಸಮೀಪ, ಮತ್ತೊಂದು ಕ್ಷಿಪಣಿ ಸೆವಾಸ್ಟೊಪೋಲ್ ಚೌಕದ ಸಮೀಪ ಸ್ಫೋಟಗೊಂಡಿದ್ದು, ಯಾವುದೇ ಪ್ರಾಣಾಪಾಯ ವರದಿಯಾಗಿಲ್ಲ.
- ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮೀರ್ ಝೆಲೆನ್ಸ್ಕಿ 'ನಾವು ನಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸುವುದಿಲ್ಲ, ನಮ್ಮ ರಾಜ್ಯವನ್ನು ರಕ್ಷಿಸುತ್ತೇವೆ. ಯುದ್ಧವು ನಡೆಯಲಿದ್ದು, ನಾವು ಸಿದ್ಧರಾಗಿರಬೇಕು ಎಂದು ಹೇಳಿರುವ ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
- ಉಕ್ರೇನ್ನ ಚೆರ್ನೊಬಿಲ್ ಪ್ರದೇಶದಲ್ಲಿ ರಷ್ಯಾದ ಮಿಲಿಟರಿ ವಾಹನಗಳ ಓಡಾಟದ ಕಾರಣದಿಂದಾಗಿ ಅಣುವಿದ್ಯುತ್ ಸ್ಥಾವರದ ಬಳಿ ವಿಕಿರಣ ಹೊರಸೂಸುವಿಕೆ ಸಾಮಾನ್ಯ ಮಟ್ಟಕ್ಕಿಂತ 20 ಪಟ್ಟು ಹೆಚ್ಚಾಗಿದೆ ಎಂದು ವಿಕಿರಣ ಮೇಲ್ವಿಚಾರಣಾ ಕೇಂದ್ರಗಳು ವರದಿ ಮಾಡಿವೆ.
- ಉಕ್ರೇನ್ನಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರಲು ವಿದೇಶಾಂಗ ಇಲಾಖೆ ಮತ್ತು ಉಕ್ರೇನ್ನ ಭಾರತೀಯ ರಾಯಭಾರ ಕಚೇರಿ ಶ್ರಮಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸುವವರ ಮೊದಲ ಬ್ಯಾಚ್ ಅನ್ನು ಏರ್ ಇಂಡಿಯಾ ವಿಮಾನದ ಮೂಲಕ ರೊಮೇನಿಯಾಗೆ ಕರೆತರಲಾಗಿದೆ.
- ರಷ್ಯಾದ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆದಿದ್ದು, ಉಕ್ರೇನ್ ಕುರಿತಂತೆ ತಮ್ಮ ನಿಲುವನ್ನು ಬಹಿರಂಗಪಡಿಸಿದ್ದಾರೆ.
- ರಷ್ಯಾ ಮತ್ತು ಉಕ್ರೇನ್ ನಡುವಿನ ದಾಳಿ ಮತ್ತು ಪ್ರತಿದಾಳಿಯಲ್ಲಿ ಸುಮಾರು 2,800 ಮಂದಿ ರಷ್ಯಾದ ಸೈನಿಕರು ಮೃತಪಟ್ಟಿದ್ದು, 80 ಟ್ಯಾಂಕ್, 10 ವಿಮಾನಗಳು, 7 ಹೆಲಿಕಾಪ್ಟರ್ಗಳನ್ನು ನಾಶಪಡಿಸಲಾಗಿದೆ ಎಂದು ಉಕ್ರೇನ್ ಸಚಿವರೊಬ್ಬರು ಮಾಹಿತಿ ನೀಡಿದ್ದಾರೆ.