ಮಾಸ್ಕೋ: ರಷ್ಯಾದಲ್ಲಿ ಕೋವಿಡ್ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಕಳೆದ ನವೆಂಬರ್ ತಿಂಗಳಲ್ಲಿ ಬರೋಬ್ಬರಿ 87,500ಕ್ಕೂ ಹೆಚ್ಚು ಜನರು ಕೋವಿಡ್-19 ವೈರಸ್ಗೆ ಬಲಿಯಾಗಿದ್ದಾರೆ. ಇದು ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಅತಿ ಹೆಚ್ಚು ಮಂದಿ ಮೃತಪಟ್ಟ ತಿಂಗಳಾಗಿದೆ ಎಂದು ರಾಜ್ಯ ಅಂಕಿಅಂಶಗಳ ಸಂಸ್ಥೆ ಗುರುವಾರ ವರದಿ ಮಾಡಿದೆ.
ರೋಸ್‌ಸ್ಟಾಟ್‌ನ ಅಂಕಿಅಂಶಗಳ ಪ್ರಕಾರ, ಏಪ್ರಿಲ್ 2020 ರಿಂದ ಅಕ್ಟೋಬರ್ 2021 ರ ವರೆಗೆ ಕೊರೊನಾ ವೈರಸ್ಗೆ ಸಂಬಂಧಿಸಿದಂತೆ ಸುಮಾರು 6,26,000 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ. ಇಲ್ಲಿಯವರೆಗೆ ರಷ್ಯಾದ ಟಾಸ್ಕ್ಫೋರ್ಸ್ ವರದಿ ಮಾಡಿದ ಸಾವಿನ ಸಂಖ್ಯೆಗಿಂತ ಇದು ಎರಡು ಪಟ್ಟು ಹೆಚ್ಚಿದೆ.
ರೋಸ್‌ಸ್ಟಾಟ್ ವರದಿಯ ಪ್ರಕಾರ, ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟು ಚಿಕಿತ್ಸೆ ಫಲಕಾರಿಯಾಗದೆ 71,187 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 8,939 ಸಾವುಗಳು ವೈರಸ್‌ನಿಂದ ಉಂಟಾಗಿರಬಹುದು ಆದರೆ, ಪರೀಕ್ಷೆಯಿಂದ ದೃಢೀಕರಿಸಲ್ಪಟ್ಟಿಲ್ಲ. 1,477 ಪ್ರಕರಣಗಳಲ್ಲಿ ವೈರಸ್ ಇತರೆ ರೋಗಗಳ ಮಾರಕ ತೊಡಕುಗಳನ್ನು ಗಮನಾರ್ಹವಾಗಿ ಉಲ್ಬಣಗೊಳಿಸಿದ್ದರಿಂದ ಸಾವನ್ನಪ್ಪಿದ್ದಾರೆ. ಮತ್ತು 5,924 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಇತರೆ ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸಿದೆ.
ರಷ್ಯಾದಲ್ಲಿ ಶುಕ್ರವಾರ 21,073 ಹೊಸ ಪ್ರಕರಣಗಳು ಮತ್ತು 926 ಸಾವುಗಳು ವರದಿಯಾಗಿವೆ. ಕೊರನಾ ವೈರಸ್ ಟಾಸ್ಕ್ಫೋರ್ಸ್ ಈವರೆಗೆ ಒಟ್ಟು 10.5 ಮಿಲಿಯನ್ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 307,948 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ. ಇದು ರಾಜ್ಯ ಅಂಕಿಅಂಶಗಳ ಸಂಸ್ಥೆ ವರದಿ ಮಾಡಿದ್ದಕ್ಕಿಂತ ಎರಡು ಪಟ್ಟು ಕಡಿಮೆ ಇದೆ.