ಮಾಸ್ಕೋ:ಎಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಳ್ಳಲು ವಿಫಲವಾಗಿ ಗಡಿ ಅತಿಕ್ರಮವಾಗಿ ಪ್ರವೇಶ ಮಾಡಲು ಮುಂದಾಗುವ ಯುದ್ಧನೌಕೆಗಳನ್ನು ಗುಂಡು ಹಾರಿ ಉಡಾಯಿಸಲು ರಷ್ಯಾ ಸಿದ್ಧವಾಗಿದೆ ಎಂದು ರಷ್ಯಾದ ಹಿರಿಯ ರಾಜತಾಂತ್ರಿಕರೊಬ್ಬರು ಖಡಕ್ ಸಂದೇಶ ರವಾನಿಸಿದ್ದಾರೆ.
ಕಳೆದ ದಿನ ಕಪ್ಪು ಸಮುದ್ರದಲ್ಲಿ ದೇಶದ ಜಲ ಪ್ರದೇಶದ ಗಡಿಯನ್ನು ದಾಟಿ ಬಂದಿದ್ದ ಬ್ರಿಟನ್ನ ಬ್ರಿಟಿಷ್ ರಾಯಲ್ ನೇವಿ ಹಡಗನ್ನು ತಡೆಯಲು ರಷ್ಯಾ ಎಚ್ಚರಿಕೆ ನೀಡುವ ಗುಂಡುಗಳನ್ನು ಹಾರಿಸಿತ್ತು. ಕ್ರಿಮಿಯಾದ ಕೇಪ್ ಫಿಯೊಲೆಂಟ್ ಕರಾವಳಿಯಲ್ಲಿ ಈ ಘಟನೆ ನಡೆದಿತ್ತು. ಸದ್ಯ ಈ ಘಟನೆಯನ್ನು ಉಲ್ಲೇಖಿಸಿ ರಾಜತಾಂತ್ರಿಕರು ಹೇಳಿಕೆ ಕೊಟ್ಟಿದ್ದಾರೆ.
ಇದನ್ನು ಓದಿ: ಬ್ರಿಟನ್ ನೇವಿ ಅತಿಕ್ರಮ ಗಡಿ ಪ್ರವೇಶ; ಗುಂಡು ಹಾರಿಸಿ ಎಚ್ಚರಿಸಿದ ರಷ್ಯಾ
ಈ ಘಟನೆಯು ಶೀತಲ ಸಮರದ ನಂತರ ಮೊದಲ ಬಾರಿಗೆ ನಡೆದಿದ್ದಾಗಿದೆ. ನ್ಯಾಟೋ ಯುದ್ಧನೌಕೆಯನ್ನು ತಡೆಯಲು ಗುಂಡು ಹಾರಿಸಿದ್ದನ್ನು ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ರಯಾಬ್ಕೊವ್ ಒಪ್ಪಿಕೊಂಡಿದ್ದಾರೆ. "ರಷ್ಯಾದ ಗಡಿಗಳ ಉಲ್ಲಂಘನೆ, ಅತಿಕ್ರಮ ಪ್ರವೇಶ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಗತ್ಯವಿದ್ದರೆ ರಾಜತಾಂತ್ರಿಕ, ರಾಜಕೀಯ ಮತ್ತು ಮಿಲಿಟರಿ ಎಲ್ಲ ರೀತಿಯಿಂದಲೂ ಇದನ್ನು ರಕ್ಷಿಸಲಾಗುವುದು. ಬ್ರಿಟಿಷ್ ನೌಕಾಪಡೆಯು ತನ್ನ ನೌಕೆಯನ್ನು ಆಕ್ರಮಣಕಾರಿಯಾಗಿ ಗಡಿಯೊಳಗೆ ರವಾನಿಸಿತು" ಎಂದು ಹೇಳಿದ್ದಾರೆ. "ನಮ್ಮ ಶಕ್ತಿಯನ್ನು ಪರೀಕ್ಷಿಸಲು ಪ್ರಯತ್ನಿಸುವವರು ಹೆಚ್ಚಿನ ಅಪಾಯಗಳನ್ನು ಆಹ್ವಾನಿಸಿಕೊಳ್ಳಲು ಮುಂದಾಗಿರಿ" ಎಂಬ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.
ಭವಿಷ್ಯದಲ್ಲಿ ಇಂತಹ ಒಳನುಸುಳುವಿಕೆಯನ್ನು ತಡೆಯಲು ರಷ್ಯಾ ಏನು ಕ್ರಮ ಕೈಗೊಳ್ಳುತ್ತದೆ ಎಂದು ಪ್ರಶ್ನಿಸಿದಾಗ" ಎಚ್ಚರಿಕೆಗಳು ಕೆಲಸ ಮಾಡದಿದ್ದರೆ ಗುಂಡು ಹಾರಿಸಲು ಸಿದ್ಧವಾಗಿ ನಿಲ್ಲುತ್ತೇವೆ. ಅಂತಾರಾಷ್ಟ್ರೀಯ ಕಾನೂನನ್ನು ಗೌರವಿಸಬೇಕು ಎಂಬ ಉದ್ದೇಶದಿಂದ ಮೊದಲು ಮನವಿ ಮಾಡಬಹುದು. ಇದು ಫಲಕಾರಿಯಾಗದಿದ್ದರೆ ದಾಳಿ ಮಾಡುತ್ತೇವೆ" ಎಂದರು.