ನವದೆಹಲಿ: ಉಕ್ರೇನ್ ಮೇಲಿನ ಯುದ್ಧದ ಪರಿಣಾಮವಾಗಿ ವಿವಿಧ ರಾಷ್ಟ್ರಗಳು ರಷ್ಯಾ ಮೇಲೆ ನಿರ್ಬಂಧ ವಿಧಿಸಿವೆ. ಈ ನಿರ್ಬಂಧದಿಂದಾಗಿ ಅನೇಕ ಸರಕುಗಳನ್ನು ಪಡೆದುಕೊಳ್ಳಲು ರಷ್ಯಾಗೆ ಸಾಧ್ಯವಾಗುತ್ತಿಲ್ಲ. ಈ ಬೆನ್ನಲ್ಲೇ ರಷ್ಯಾ ಕೂಡಾ ಹೊಸ ತಂತ್ರ ಹೂಡಿದ್ದು, ಈ ಮೂಲಕ ನಿರ್ಬಂಧ ವಿಧಿಸಿದ ರಾಷ್ಟ್ರಗಳನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
ದೂರಸಂಪರ್ಕ, ವೈದ್ಯಕೀಯ, ವಾಹನ, ಕೃಷಿ ಮತ್ತು ವಿದ್ಯುತ್ ಉಪಕರಣ ಮತ್ತು ಅರಣ್ಯ ಉತ್ಪನ್ನಗಳನ್ನು ರಪ್ತು ಮಾಡದಿರಲು ರಷ್ಯಾ ಮುಂದಾಗಿದೆ. ರಷ್ಯಾದ ಬಂದರುಗಳಲ್ಲಿ ವಿದೇಶಿ ಹಡಗುಗಳನ್ನು ನಿರ್ಬಂಧ ಹೇರಲಾಗುತ್ತದೆ ಎಂದು ರಷ್ಯಾದ ಆರ್ಥಿಕ ಸಚಿವಾಲಯ ಹೇಳಿದೆ.
ಪ್ರಸ್ತುತ ಕೆಲವು ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧಗಳ ಸರಮಾಲೆಯನ್ನೇ ವಿಧಿಸಿವೆ. ಅದರಲ್ಲಿ ವಿಶೇಷವಾಗಿ ತೈಲ ಖರೀದಿಸುವುದನ್ನು ಸ್ಥಗಿತಗೊಳಿಸಲಾಗಿದೆ. ರಷ್ಯಾದ ಮೇಲೆ ಹೇರಿದ ನಿರ್ಬಂಧಗಳಿಗೆ ಇದು ಪ್ರತಿಕ್ರಿಯೆಯಾಗಿದೆ. ಬೇರೆ ರಾಷ್ಟ್ರಗಳು ಸ್ನೇಹಪರವಲ್ಲದ ಕ್ರಮಗಳನ್ನು ಕೈಗೊಂಡಿವೆ ಎಂದು ರಷ್ಯಾ ಹೇಳಿದೆ.