ಮಾಸ್ಕೋ: ಕ್ರೆಮ್ಲಿನ್ (ರಷ್ಯಾ ಸರ್ಕಾರ) ಅನ್ನು ಟೀಕಿಸುವ ಎರಡು ಆನ್ಲೈನ್ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ಈ ಮೂಲಕ ಮುಂದಿನ ಸೆಪ್ಟೆಂಬರ್ನಲ್ಲಿ ನಡೆಯಲಿರುವ ಸಂಸತ್ ಚುನಾವಣೆಗೂ ಮುನ್ನ ಸ್ವತಂತ್ರ ಮಾಧ್ಯಮಗಳನ್ನು ಹತ್ತಿಕ್ಕುವಂತಹ ಕೆಲಸವನ್ನು ರಷ್ಯಾ ಸರ್ಕಾರ ಮಾಡುತ್ತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ರಷ್ಯಾದ ಪ್ರಮುಖ ವಿಮರ್ಶಕ ಮಿಖಾಯಿಲ್ ಖೊಡೋರ್ಕೋವ್ಸ್ಕೈ ಅವರ ಒಕ್ಟ್ರೀಟೀ ಮೀಡಿಯಾ ಮತ್ತು ಎಂಬಿಕೆಹೆಚ್ ಆನ್ಲೈನ್ ಮಾಧ್ಯಮಗಳ ವೆಬ್ಸೈಟ್ಗಳು ಬುಧವಾರದಿಂದ ರಷ್ಯಾದ ಇಂಟರ್ನೆಟ್ ಪೂರೈಕೆ ಮತ್ತು ಬಳಕೆದಾರರಿಗೆ ಲಭ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.
ಖೊಡೋರ್ಕೋವ್ಸ್ಕೈ ಓರ್ವ ರಷ್ಯಾ ಉದ್ಯಮಿಯಾಗಿದ್ದು, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಡಳಿತವನ್ನು ಪ್ರಶ್ನಿಸುತ್ತಿದ್ದರು. ಹೀಗಾಗಿ "ರಾಜಕೀಯ ಸೇಡು" ಆರೋಪದಲ್ಲಿ ಬಂಧಿಯಾಗಿ, ದಶಕಗಳ ಕಾಲ ಜೈಲಿನಲ್ಲಿ ಕಳೆದು ಬಿಡುಗಡೆಯಾದ ನಂತರ ಅವರು ಲಂಡನ್ ಸೇರಿಕೊಂಡಿದ್ದಾರೆ.
ನಮ್ಮ ವೆಬ್‌ಸೈಟ್ ಬ್ಲಾಕ್ ಮಾಡಿದ ಬಗ್ಗೆ ನಮಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ನಿರ್ಬಂಧಕ್ಕೊಳಗಾದ ಎರಡೂ ಮಾಧ್ಯಮ ಸಂಸ್ಥೆಗಳು ಹೇಳಿವೆ. ಆದರೆ, ರಷ್ಯಾ ರಾಜ್ಯ ನೋಂದಾವಣೆಯ ಪ್ರಕಾರ, ಪ್ರಾಸಿಕ್ಯೂಟರ್ ಜನರಲ್ ಕಚೇರಿಯ ಆದೇಶದ ಮೇರೆಗೆ ಎರಡೂ ಸುದ್ದಿವಾಹಿನಿಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಅಶಾಂತಿಯನ್ನು ಸೃಷ್ಟಿಸುವುದು, ಉಗ್ರ ಚಟುವಟಿಕೆಗಳು ಅಥವಾ ಅನಧಿಕೃತ ರ್ಯಾಲಿಗಳಲ್ಲಿ ಭಾಗವಹಿಸುವ ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವ ಕಾನೂನಿನ ಅಡಿಯಲ್ಲಿ ವೆಬ್ಸೈಟ್ಗಳಿಗೆ ನಿರ್ಬಂಧ ಹೇರಿರುವುದಾಗಿ ನೋಂದಾವಣೆ ಉಲ್ಲೇಖಿಸಿದೆ.