ರೋಮ್ (ಇಟಲಿ):ಭಾರಿ ಮಳೆಯಿಂದಾಗಿ ಮಧ್ಯ ಇಟಲಿಯ ಬಹುತೇಕ ಭಾಗಗಳು ಜಲಾವೃತವಾಗಿವೆ. ಹಲವೆಡೆ ಭೂ ಕುಸಿತದಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸಿದ್ದು, ರಕ್ಷಣಾ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ಭಾನುವಾರ ಮತ್ತು ಸೋಮವಾರ ಪೂರ್ತಿ ದಿನ 160 ಅಗ್ನಿಶಾಮಕ ದಳಗಳು ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿದ್ದು, ನೊನನ್ತೊಲಾ, ಫೊಸ್ಸಾಲ್ಟಾ ಮತ್ತು ಕ್ಯಾಂಪೋ ಗಲಿಯಾನೋ ಪ್ರದೇಶದ ಜನರ ಸಹಾಯಕ್ಕೆ ಧಾವಿಸಿವೆ.
ಈ ಸ್ಥಳದಲ್ಲಿ ಪನಾರೋ ನದಿ ರೌದ್ರಾವತಾರ ತಾಳಿದ್ದು, ಈ ನದಿಯ ನೀರು ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ನೊನನ್ತೊಲಾ ಪ್ರದೇಶದಲ್ಲಿ ರಸ್ತೆ ಕುಸಿದಿದ್ದು, ಜನರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಸಾಕಷ್ಟು ಮಂದಿ ಸ್ಥಳಾಂತರಗೊಂಡಿದ್ದಾರೆ.
ಇಟಲಿಯಲ್ಲಿ ಸುಮಾರು 30 ವರ್ಷಗಳಿಂದ ಈ ರೀತಿಯ ಮಳೆಯಾಗಿರಲಿಲ್ಲ ಎಂದು ಅಲ್ಲಿನ ನ್ಯೂಸ್ ಏಜೆನ್ಸಿ ಎಎನ್ಎಸ್ಎ ವರದಿ ಮಾಡಿದೆ. ಮುಂದಿನ ಎರಡು ದಿನಗಳವರೆಗೆ ಮಳೆ ಮುಂದುವರೆಯುವ ಸಾಧ್ಯತೆಯಿದೆ.