ಜಿನಿವಾ: ಪರಸ್ಪರ ಆರೋಪ- ಪ್ರತ್ಯಾರೋಪಗಳಲ್ಲಿ ತೊಡಗಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಸ್ವಿಟ್ಜರ್‌ಲ್ಯಾಂಡ್‌ನ ಜಿನಿವಾದಲ್ಲಿ ಮಹತ್ವದ ಚರ್ಚೆಯೊಂದಿಗೆ ಶೃಂಗಸಭೆಯನ್ನು ಮುಕ್ತಾಯಗೊಳಿಸಿದ್ದಾರೆ.
ವಾಷಿಂಗ್ಟನ್ ಮತ್ತು ಮಾಸ್ಕೋದಲ್ಲಿ ತಮ್ಮ ರಾಷ್ಟ್ರಗಳ ರಾಯಭಾರಿಗಳನ್ನು ವಾಪಸ್ ಕರೆಸಿಕೊಳ್ಳುವ ವಿಚಾರ ಹಾಗೂ ಪರಮಾಣು ಶಸ್ತ್ರಾಸ್ತ್ರಗಳ ಒಪ್ಪಂದ ವಿಚಾರವಾಗಿ ಉಭಯನಾಯಕರು ಮಾತುಕತೆ ನಡೆಸಿದ್ದಾರೆ. ಸೈಬರ್ ದಾಳಿಗಳಿಗೆ ಸಂಬಂಧಿಸಿದಂತೆ ಇಬ್ಬರು ನಾಯಕರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಅಮೆರಿಕ ಗುಪ್ತಚರ ಇಲಾಖೆ ಮಾಹಿತಿಯ ಹೊರತಾಗಿಯೂ, ಸೈಬರ್ ದಾಳಿಗೂ ನಮ್ಮ ದೇಶಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪುಟಿನ್ ಸ್ಪಷ್ಟಪಡಿಸಿದ್ದಾರೆ.
ಯುಎಸ್ನ ಗಡಿ ನಿಯಮಗಳನ್ನು ಮೀರಿದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪುಟಿನ್ಗೆ ಬೈಡನ್ ಎಚ್ಚರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪುಟಿನ್ ಜಾಗತಿಕವಾಗಿ ತಮ್ಮ ವ್ಯಕ್ತಿತ್ವನ್ನು ಕುಂದಿಸಿಕೊಳ್ಳುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ, ಅವರ ನಡವಳಿಕೆ ಬದಲಿಸಿಕೊಂಡರೆ ಒಳ್ಳೆಯದು ಎಂದು ಅಮೆರಿಕ ಅಧ್ಯಕ್ಷ ಬೈಡನ್ ಅಭಿಪ್ರಾಯ ಪಟ್ಟಿದ್ದಾರೆ.
ಬೈಡನ್ ಅಧಿಕಾರ ವಹಿಸಿಕೊಂಡಾಗಿನಿಂದ ರಷ್ಯಾ ಮತ್ತು ಅಮೆರಿಕ ನಡುವಿನ ಸಂಬಂಧ ಹಳಸುತ್ತಿದೆ. ಈ ಮಧ್ಯೆಯೂ ಬೈಡನ್- ಪುಟಿನ್ ಇಬ್ಬರು ನಾಯಕರು ಸತತ ಮೂರುಗಂಟೆಗಳಿಗೂ ಅಧಿಕ ಕಾಲ ಮಾತುಕತೆ ನಡೆಸಿದ್ದಾರೆ. ಬೈಡನ್, ರಷ್ಯಾ ಪ್ರತಿಪಕ್ಷ ನಾಯಕ ಅಲೆಕ್ಸಿ ನವಲ್ನಿಯವರ ಬಂಧನ ಕುರಿತಾಗಿ ಮೂಲ ಹಕ್ಕುಗಳ ಉಲ್ಲಂಘನೆ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.
ಆದರೆ, ಅಲೆಕ್ಸಿ ಜೈಲು ಶಿಕ್ಷೆಯನ್ನು ಸಮರ್ಥಿಸಿಕೊಂಡ ಪುಟಿನ್, ಅಮೆರಿಕದಲ್ಲಿ ನಡೆದ ಕ್ಯಾಪಿಟಲ್ ದಂಗೆ ಹಾಗೂ ಕಪ್ಪು ವರ್ಣೀಯರ ಮೇಲಿನ ದೌರ್ಜನ್ಯದ ಬಗ್ಗೆ ಪ್ರಸ್ತಾಪಿಸಿ ಬೈಡನ್ಗೆ ತಿರುಗೇಟು ಕೊಟ್ಟರು.
2026 ರ ವೇಳೆಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಸೀಮಿತಗೊಳಿಸುವ ಸ್ಟಾರ್ಟ್ (START) ಒಪ್ಪಂದವನ್ನು ಬದಲಿಸುವ ಕುರಿತಾಗಿ ಮಾತುಕತೆ ನಡೆಸಲು ಪುಟಿನ್, ಬೈಡನ್ ಒಪ್ಪಿದ್ದಾರೆ. 2014 ರಲ್ಲಿ ಉಕ್ರೇನ್‌ನ ಕ್ರೈಮಿಯಾವನ್ನು ರಷ್ಯಾ ವಶಪಡಿಸಿಕೊಂಡಿದ್ದಕ್ಕೆ ಮತ್ತು ಮಿಲಿಟರಿ ಹಸ್ತಕ್ಷೇಪಕ್ಕೆ ಅಮೆರಿಕವು ರಷ್ಯಾ ಒಪ್ಪಂದದಿಂದ ಹಿಂದೆ ಸರಿದಿತ್ತು.
ಇದನ್ನೂ ಓದಿ:ನಿರೀಕ್ಷೆಯಂತೆ ಅಮೆರಿಕ, ರಷ್ಯಾ ಅಧ್ಯಕ್ಷರ ಭೇಟಿ; ಎರಡು ಮಹಾನ್ ಶಕ್ತಿಗಳೆಂದು ಬಣ್ಣನೆ
2017 ರಲ್ಲಿ ಮಾತುಕತೆ ಪುನಾರಂಭವಾದರೂ ಸ್ಟಾರ್ಟ್ ಒಪ್ಪಂದವನ್ನು ರೂಪಿಸುವಲ್ಲಿ ಟ್ರಂಪ್ ಸರ್ಕಾರ ವಿಫಲವಾಯಿತು. ಇತ್ತೀಚೆಗಷ್ಟೇ ಪುಟಿನ್ ಒಬ್ಬ ಕೊಲೆಗಾರ ಎಂದು ಬೈಡನ್ ಉಲ್ಲೇಖಿಸಿದ್ದರು. ಯುಎಸ್ನಲ್ಲಿದ್ದ ರಷ್ಯಾದ ರಾಯಭಾರಿ ಅನಾಟೊಲಿ ಆಂಟೊನೊವ್ ಅವರನ್ನು ವಾಪಸ್ ಕರೆಸಲಾಗಿದೆ. ಇತ್ತ ರಷ್ಯಾದಲ್ಲಿದ್ದ ಯುಎಸ್ ರಾಯಭಾರಿ ಜಾನ್ ಸುಲ್ಲಿವಾನ್ ರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ.