ಕೀವ್(ಉಕ್ರೇನ್): ರಷ್ಯಾ ಮತ್ತು ಉಕ್ರೇನ್ ನಡುವೆ ಉದ್ವಿಗ್ನ ಪರಿಸ್ಥಿತಿ ಹೆಚ್ಚುತ್ತಿರುವ ನಡುವೆಯೇ ಲುಹಾನ್ಸ್ಕ್‌ನಲ್ಲಿ ಪ್ರಬಲ ಸ್ಫೋಟ ಸಂಭವಿಸಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ. ದ್ರುಜ್ಬಾ ಗ್ಯಾಸ್ ಪೈಪ್‌ಲೈನ್‌ನಲ್ಲಿ ಸ್ಫೋಟ ಸಂಭವಿಸಿದ ಕಾರಣ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
ತುರ್ತು ಸಿಬ್ಬಂದಿಗಳು ಘಟನಾ ಸ್ಥಳದಲ್ಲಿ ಇರುವುದಾಗಿ ಸ್ಥಳೀಯ ಅನಿಲ ಮೂಲಸೌಕರ್ಯ ವ್ಯವಸ್ಥಾಪಕ ಸಂಸ್ಥೆ ಲೈಹಾನ್ಸ್ಕ್ ಗ್ಯಾಸ್ ಈ ಬಗ್ಗೆ ಹೇಳಿಕೆ ನೀಡಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ.
ಫೆಬ್ರವರಿ 19 ರಂದು ರಾತ್ರಿ 12:10 ಕ್ಕೆ, ಮಲಯಾದ ವೆರ್ಗುಂಕಾ ಬಳಿಯ ಗ್ಯಾಸ್ ಪೈಪ್‌ಲೈನ್‌ನಲ್ಲಿ ಉಂಟಾದ ಬೆಂಕಿ ಅವಘಡದ ಬಗ್ಗೆ ಮಾಹಿತಿ ದೊರೆತಿದ್ದು, ಸ್ಟೇಟ್ ಯೂನಿಟರಿ ಎಂಟರ್‌ಪ್ರೈಸ್ 'ಲುಗಾನ್ಸ್‌ಗಜ್'ನ ತುರ್ತು ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿವೆ. ಈ ಬಗ್ಗೆ ಲುಗಾನ್ಸ್‌ಗಜ್ ಸಂಸ್ಥೆ ಸುದ್ದಿಗಾರರಿಗೆ ಮಾಹಿತಿ ನೀಡಿದೆ.
ಉಕ್ರೇನಿಯನ್ ಸಶಸ್ತ್ರ ಪಡೆಗಳು ನಡೆಸಿದ ಸಕ್ರಿಯ ಶೆಲ್ ದಾಳಿಯ ನಂತರ ಉಕ್ರೇನ್‌ನ ಡಾನ್‌ಬಾಸ್‌ನಲ್ಲಿನ ಪ್ರದೇಶಗಳಲ್ಲಿ ಪರಿಸ್ಥಿತಿ ಉಲ್ಬಣಗೊಂಡಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ.