ಲಂಡನ್ (ಇಂಗ್ಲೆಂಡ್):ಅಮೆರಿಕದಲ್ಲಿ ಜನಾಂಗೀಯ ತಾರತಮ್ಯದ ಆರೋಪದಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಹುತೇಕ ರಾಷ್ಟ್ರಗಳಿಗೆ ಹಬ್ಬಿದ್ದು, ಇಂಗ್ಲೆಂಡಿನಲ್ಲಿ ನೂರಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಪ್ರತಿಭಟನಾಕಾರರನ್ನು ಕಾನೂನು ಉಲ್ಲಂಘನೆ, ಗಲಭೆ ಸೃಷ್ಟಿ, ಮಾದಕ ವಸ್ತು ಹಾಗೂ ಮಾರಕಾಸ್ತ್ರಗಳನ್ನು ಹೊಂದಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಮೆಟ್ರೋಪಾಲಿಟನ್ ಪೊಲೀಸರು ಟ್ವಿಟರ್ನಲ್ಲಿ ಬಹಿರಂಗಪಡಿಸಿದ್ದಾರೆ.
ಅಮೆರಿಕದಲ್ಲಿ ಜಾರ್ಜ್ ಫ್ಲಾಯ್ಡ್ ಸಾವಿನ ನಂತರ ಯೂರೋಪಿನ ಹಲವು ದೇಶಗಳಲ್ಲಿ ಬ್ಲಾಕ್ ಲೈವ್ ಮ್ಯಾಟರ್ಸ್ ಹೆಸರಿನಲ್ಲಿ ಪ್ರತಿಭಟನೆ ಜೋರಾಗಿದೆ. ಇಂಗ್ಲೆಂಡಿನಲ್ಲಿ ಪ್ರತಿಭಟನೆ ತೀವ್ರವಾಗಿದ್ದು, ಇದೇ ಮೊದಲ ಬಾರಿಗೆ ಬೃಹತ್ ಮಟ್ಟದ ಪ್ರತಿಭಟನೆಗಳಿಗೆ ಲಂಡನ್ ಸಾಕ್ಷಿಯಾಗುತ್ತಿದೆ. ಇದರ ಜೊತೆಗೆ ಸಾರ್ವಜನಿಕ ಆಸ್ತಿಪಾಸ್ತಿಯೂ ಕೂಡಾ ನಷ್ಟವಾಗುತ್ತಿದೆ. ಆಗಾಗ ಪೊಲೀಸರ ಮೇಲೆಯೂ ಹಲ್ಲೆ ಜರುಗುತ್ತಿದೆ.
ಕೊರೊನಾ ವೈರಸ್ ಕಾರಣದಿಂದಾಗಿ ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದ್ದು, ಯಾರೂ ಪ್ರತಿಭಟನೆ ಮಾಡಬಾರದು, ಗುಂಪುಗೂಡಬಾರದು ಎಂದು ಭಾರತೀಯ ಮೂಲದ ಇಂಗ್ಲೆಂಡ್ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಪ್ರತಿಭಟನಾಕಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.