ನವದೆಹಲಿ:ರಷ್ಯಾ ದಾಳಿಯಿಂದ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರ ಕಾರ್ಯ ಚುರುಕಾಗಿದೆ. ಇಂದು ಒಂದೇ ದಿನದಲ್ಲಿ ಮೂರು ವಿಮಾನಗಳಲ್ಲಿ ವಿವಿಧೆಡೆಯಿಂದ 628 ಭಾರತೀಯರನ್ನು ರಕ್ಷಣೆ ಮಾಡಲಾಗಿದೆ.
ರೊಮೇನಿಯಾ, ಪೋಲೆಂಡ್, ಹಂಗೇರಿಯಿಂದ 3 ವಿಮಾನಗಳಲ್ಲಿ 628 ಭಾರತೀಯರ ರಕ್ಷಣೆ ಯುದ್ಧ ಪೀಡಿತ ಉಕ್ರೇನ್‌ನಿಂದ ತಪ್ಪಿಸಿಕೊಂಡು ರೊಮೇನಿಯಾ ಗಡಿಯಲ್ಲಿ ಆಶ್ರಯ ಪಡೆದಿದ್ದ 200 ಭಾರತೀಯರನ್ನು ಆಪರೇಷನ್ ಗಂಗಾ ಕಾರ್ಯಾಚರಣೆಯಡಿ ದೆಹಲಿ ವಿಮಾನಕ್ಕೆ ತಂದಿಳಿಸಲಾಗಿದೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ರೊಮೇನಿಯಾದಿಂದ ಬಂದ ಭಾರತೀಯರನ್ನು ಸ್ವಾಗತಿಸಿದರು.
ರೊಮೇನಿಯಾ, ಪೋಲೆಂಡ್, ಹಂಗೇರಿಯಿಂದ 3 ವಿಮಾನಗಳಲ್ಲಿ 628 ಭಾರತೀಯರ ರಕ್ಷಣೆ ಇನ್ನು ಹಂಗೇರಿಯಾದ ಬುಡಾಪೆಸ್ಟ್ನಿಂದ ಭಾರತೀಯ ವಾಯುಸೇನೆಯ ಸಿ-17 ವಿಮಾನ 220 ಭಾರತೀಯರನ್ನು ಹೊತ್ತು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ರಕ್ಷಣಾ ಇಲಾಖೆಯ ರಾಜ್ಯ ಸಚಿವ ಅಜಯ್ ಭಟ್ ತಾಯ್ನಾಡಿಗೆ ಬಂದಿಳಿದ ಭಾರತೀಯರನ್ನು ಸ್ವಾಗತಿಸಿ ಸುರಕ್ಷಿತವಾಗಿ ಅವರ ನಿವಾಸಗಳಿಗೆ ತೆರಳುವ ವ್ಯವಸ್ಥೆ ಮಾಡಿದರು.
ಬಳಿಕ ಪೋಲೆಂಡ್‌ನಿಂದ 208 ಭಾರತೀಯರಿದ್ದ ವಾಯುಸೇನೆಯ ಸಿ-17 ಮೂರನೇ ವಿಮಾನವು ದೆಹಲಿ ಏರ್ಬೇಸ್ಗೆ ಬಂದಿದೆ. ಮೂರು ವಿಮಾನಗಳಲ್ಲಿ ಒಟ್ಟಾರೆ 628 ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ.
ಇಂದು 9 ವಿಮಾನಗಳಲ್ಲಿ 3 ಸಾವಿರ ಜನರ ಸ್ಥಳಾಂತರ:ಆಪರೇಷನ್ ಗಂಗಾ ಕಾರ್ಯಾಚರಣೆಯಡಿ ಇಂದು ಒಂದೇ ದಿನದಲ್ಲಿ 9 ವಿಮಾನಗಳಲ್ಲಿ 3 ಸಾವಿರಕ್ಕೂ ಅಧಿಕ ಭಾರತೀಯರನ್ನು ಕರೆತರಲಾಗುವುದು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.
ಹಂಗೇರಿ, ರೊಮೇನಿಯಾ, ಸ್ಲೋವಾಕಿಯಾ ಮತ್ತು ಪೋಲೆಂಡ್‌ನಿಂದ ವಿಮಾನಗಳು ಟೇಕಾಫ್ ಆಗಲಿವೆ. ಈಗಾಗಲೇ 3 ವಿಮಾನಗಳು ಭಾರತಕ್ಕೆ ಬಂದಿವೆ. ಒಟ್ಟು 17 ಸಾವಿರ ಭಾರತೀಯ ಪ್ರಜೆಗಳು ಉಕ್ರೇನ್ ತೊರೆದಿದ್ದಾರೆ. ಅಲ್ಲಿ ಸಿಲುಕಿರುವ ಉಳಿದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ ಆಪರೇಷನ್ ಗಂಗಾದಡಿ ವಿಮಾನಗಳನ್ನು ಹೆಚ್ಚಿಸಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.
ರೊಮೇನಿಯಾದಿಂದ 4 ಸಾವಿರ ಜನ ಸ್ಥಳಾಂತರ:ಇನ್ನು ಉಕ್ರೇನ್‌ನಿಂದ ಪಲಾಯನಗೊಂಡು ರೊಮೇನಿಯಾದಲ್ಲಿ ಆಶ್ರಯ ಪಡೆದಿರುವ 4,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗುವುದು ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
ಮುಂದಿನ 3 ದಿನಗಳಲ್ಲಿ 4,000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗುವುದು. ಬುಕಾರೆಸ್ಟ್‌ನಿಂದ ಇಂದು ಮತ್ತು ನಾಳೆ 6 ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ನಿನ್ನೆಯಷ್ಟೇ 1,300 ವಿದ್ಯಾರ್ಥಿಗಳು ಭಾರತಕ್ಕೆ ಸುರಕ್ಷಿತವಾಗಿ ತೆರಳಿದ್ದಾರೆ ಎಂದು ತಿಳಿಸಿದ್ದಾರೆ.
ಅಂದಾಜಿನ ಪ್ರಕಾರ ಒಟ್ಟು 18,000 ವಿದ್ಯಾರ್ಥಿಗಳು ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಇದುವರೆಗೆ 12,000 ಭಾರತೀಯರನ್ನು ಉಕ್ರೇನ್‌ನಿಂದ ಸ್ಥಳಾಂತರಿಸಲಾಗಿದೆ. ಇದು ಯುದ್ಧದಿಂದ ಧ್ವಂಸಗೊಂಡ ರಾಷ್ಟ್ರದಲ್ಲಿ ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 60 ರಷ್ಟಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮಾಹಿತಿ ನೀಡಿದ್ದಾರೆ.
ಓದಿ:ಮುಂದುವರಿದ ರಷ್ಯಾ ಆಕ್ರಮಣ.. ಉಕ್ರೇನ್ ಸ್ಥಿತಿ ಇನ್ನಷ್ಟು ಭೀಕರ.. 2 ಸಾವಿರ ನಾಗರಿಕರ ಸಾವು