ಜಿನೀವಾ: 2022 ಆರಂಭವಾಗುತ್ತಿದ್ದಂತೆ ವಿಶ್ವದಲ್ಲಿ ಕೊರೊನಾ ವೈರಸ್ ಸೋಂಕಿನ ಹೊಸ ಅಲೆ ಹರಡುವ ಭೀತಿ ಕಾಡುತ್ತಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಒಮಿಕ್ರಾನ್ಸೋಂಕಿನ ಕುರಿತಾದ ಮತ್ತಷ್ಟು ಮಾಹಿತಿ ನೀಡಿದ್ದಾರೆ.
ವಿಶ್ವದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದೆ. ಈ ಹಿನ್ನೆಲೆ ಅನೇಕ ರಾಷ್ಟ್ರಗಳಲ್ಲಿ ಕೋವಿಡ್ ನಿಯಮಗಳನ್ನು ಕಠಿಣಗೊಳಿಸಲಾಗಿದೆ. ಒಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮತ್ತು ಸೋಂಕಿತರು ಸಾವನ್ನಪ್ಪುತ್ತಿರುವುದರಿಂದ ಒಮಿಕ್ರಾನ್ ರೂಪಾಂತರಿ ಕೇವಲ ಸೌಮ್ಯ ಕಾಯಿಲೆ ಎಂದು ಸೂಚಿಸುವುದು ಅಪಾಯಕಾರಿ. ಜಾಗರೂಕರಾಗಿರಿ ಅಂತಾ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಗುರುವಾರ ಹೇಳಿದ್ದಾರೆ.
ಡೆಲ್ಟಾಕ್ಕೆ ಹೋಲಿಸಿದರೆ ಒಮಿಕ್ರಾನ್ ಕಡಿಮೆ ತೀವ್ರವಾಗಿರುವಂತೆ ಕಂಡು ಬಂದಿದೆ. ಆದರೂ ಸಹ ಇದು ಸೌಮ್ಯ ಲಕ್ಷಣಗಳನ್ನು ಹೊಂದಿದೆ ಎಂದು ವರ್ಗೀಕರಿಸಬಾರದು. ಈ ಹಿಂದಿನ ರೂಪಾಂತರಿಗಳಂತೆ ಒಮಿಕ್ರಾನ್ ಸಹ ಜನರನ್ನು ಕಾಡುತ್ತಿದೆ. ಹೆಚ್ಚು ಜನರಿಗೆ ಸೋಂಕು ತಗುಲುತ್ತಿರುವುದಲ್ಲದೇ, ಅನೇಕರು ಸಾವನ್ನಪ್ಪುತ್ತಿದ್ದಾರೆ ಎಂದು ಟೆಡ್ರೊಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.