ನ್ಯೂಯಾರ್ಕ್(ಅಮೆರಿಕ):ಮಾಧ್ಯಮಕ್ಕೆ ತನ್ನದೇ ಸಂಹಿತೆಯಿದೆ. ಜನರನ್ನು ಅತ್ಯಂತ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಲು ಮಾಧ್ಯಮಗಳು ಯಾವಾಗಲೂ ಯತ್ನಿಸುತ್ತಿರುತ್ತವೆ. ಅಪರಾಧ ಸುದ್ದಿಗಳ ವಿಚಾರದಲ್ಲಿ ಹಿಂಸಾತ್ಮಕ ಮತ್ತು ಸಂವೇದನಾರಹಿತ ಸುದ್ದಿಗಳು ಮತ್ತು ಚಿತ್ರಗಳನ್ನು ಪ್ರಕಟಿಸುವಾಗ ಸದಾ ತನ್ನ ಸಂಹಿತೆಯನ್ನು ಪಾಲಿಸಬೇಕಾಗುತ್ತದೆ. ಮಾಧ್ಯಮಗಳಲ್ಲಿ ಪ್ರಕಟವಾಗುವ ಚಿತ್ರಗಳು ವಿಚಾರದಲ್ಲೂ ಕೂಡಾ ಇದನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ರಕ್ತಸಿಕ್ತ ಫೋಟೋಗಳಿಂದ ದೂರವಿರುವುದು ಮತ್ತು ಬ್ಲರ್ ಮಾಡುವ ಪದ್ಧತಿಯಿದೆ. ಆದರೆ ಅಮೆರಿಕದ ನ್ಯೂಯಾರ್ಕ್ ಟೈಮ್ಸ್‌ನ ಬೇರೆ ಚರ್ಚೆಯನ್ನೇ ಹುಟ್ಟುಹಾಕಿದೆ.
ಉಕ್ರೇನ್ ಮೇಲೆ ರಷ್ಯಾದ ದಾಳಿ ತೀವ್ರವಾಗಿದೆ. ಈಗಾಗಲೇ ಸಾಕಷ್ಟು ಮಂದಿ ಯುದ್ಧ ಪೀಡಿತ ಪ್ರದೇಶಗಳಿಂದ ಪಲಾಯನ ಮಾಡುತ್ತಿದ್ದಾರೆ. ನ್ಯೂಯಾರ್ಕ್ ಟೈಮ್ಸ್‌ನ ಮೊದಲ ಪುಟದಲ್ಲಿ ಮಾರ್ಚ್ 7ರಂದು (ಸೋಮವಾರ) ಫೋಟೋ ಪ್ರಕಟವಾಗಿದ್ದು, ಯುದ್ಧದ ಭೀಕರತೆಯನ್ನು ಬಿಚ್ಚಿಡುತ್ತದೆ.
ಫೋಟೋದಲ್ಲಿರುವಂತೆ ನಾಲ್ಕು ಮಂದಿ ರಸ್ತೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಅವರು ಉಕ್ರೇನ್ನಿಂದ ಪಲಾಯನ ಮಾಡಲು ಯತ್ನಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಫೋಟೋ ತೆಗೆದ ನ್ಯೂಯಾರ್ಕ್ ಟೈಮ್ಸ್‌ನ ಪತ್ರಕರ್ತೆ ಲಿನ್ಸೆ ಅಡ್ಡಾರಿಯೋ ರಷ್ಯಾ ಪಡೆಗಳ ಶೆಲ್ ದಾಳಿಯಲ್ಲಿ ಅವರು ಸಾವನ್ನಪ್ಪಿದ್ದಾರೆ. ನನ್ನ ಮುಂದೆಯೇ ಅವರು ಸಾವನ್ನಪ್ಪಿದ್ದಾರೆ ಎಂದು ಟ್ವಿಟರ್ನಲ್ಲಿ ಫೋಟೋ ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ನಾನು ಯಾವುದಾದರೂ ಒಂದು ಘಟನೆಯನ್ನು ನೋಡುವವರೆಗೆ ಯಾವುದನ್ನೂ ನಂಬುವುದಿಲ್ಲ. ನಾನು ಯುದ್ಧವನ್ನು ಸಾಕಷ್ಟು ದಿನಗಳಿಂದ ಕವರ್ ಮಾಡುತ್ತಿದ್ದೇನೆ. ಇದು ನಾಗರಿಕರನ್ನು ಗುರಿಯಾಗಿಸಿ, ರಷ್ಯಾ ದಾಳಿಯನ್ನು ನಡೆಸುತ್ತಿದೆ ಎಂಬುದನ್ನು ಈ ಫೋಟೋ ಸಾಬೀತುಪಡಿಸುತ್ತದೆ. ಈ ಫೋಟೋ ತುಂಬಾ ದೂರದವರೆಗೆ ತಲುಪುತ್ತದೆ ಎಂಬುದು ಮುಖ್ಯ ಎಂದು ಲಿನ್ಸೆ ಅಡ್ಡಾರಿಯೋ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.