ಕೀವ್(ಉಕ್ರೇನ್): ಉಕ್ರೇನ್ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದಾಗಿನಿಂದಲೂ ಕೇಂದ್ರ ಸರ್ಕಾರ ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗಾಗಿ ಎಲ್ಲ ರೀತಿಯ ಕಸರತ್ತು ನಡೆಸುತ್ತಿದೆ. ಇದರ ಮಧ್ಯೆ ಕೆಲ ವಿದ್ಯಾರ್ಥಿಗಳು ತಮ್ಮ ರಕ್ಷಣೆಗೋಸ್ಕರ ಮನವಿ ಮಾಡುತ್ತಿರುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇಂದು ಕೂಡ ಉಕ್ರೇನ್ನಲ್ಲಿರುವ ಭಾರತೀಯ ವಿದ್ಯಾರ್ಥಿನಿಯೋರ್ವಳು ನಮಗೆ ಯಾರೂ ಸಹಾಯ ಮಾಡ್ತಿಲ್ಲ ಎಂದು ಹೇಳಿಕೊಳ್ಳುತ್ತಿರುವ ವಿಡಿಯೋ ತುಣುಕವೊಂದು ವೈರಲ್ ಆಗಿದೆ. ಇದನ್ನ ಸಮಾಜವಾದಿ ಪಕ್ಷದ ನಾಯಕ, ಮಾಜಿ ಸಿಎಂ ಅಖಿಲೇಶ್ ಯಾದವ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಉಕ್ರೇನ್ನಿಂದಲೇ ವಿಡಿಯೋ ಹರಿಬಿಟ್ಟ ವಿದ್ಯಾರ್ಥಿನಿ ಈಗಾಗಲೇ ಅನೇಕ ಸಲ ಭಾರತೀಯ ರಾಯಭಾರ ಕಚೇರಿಗೆ ತಮ್ಮನ್ನು ರಕ್ಷಣೆ ಮಾಡುವಂತೆ ಸಂದೇಶ ಕಳುಹಿಸಿದ್ದೇವೆ. ಆದರೆ, ನಮ್ಮ ಕರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ಬರುತ್ತಿಲ್ಲ, ನಮ್ಮನ್ನ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಉಕ್ರೇನ್ನಿಂದ 800 ಕಿಲೋ ಮೀಟರ್ ದೂರದ ಗಡಿಯಲ್ಲಿ ನಾವಿದ್ದೇವೆ. ಕೇಂದ್ರ ಸರ್ಕಾರ ನಮಗೆ ಸಹಾಯ ಮಾಡುತ್ತಿದೆ ಎಂದು ಬಿತ್ತರಿಸುತ್ತಿರುವ ವರದಿಯನ್ನು ದಯವಿಟ್ಟು ನಂಬಬೇಡಿ ಎಂದು ಹೇಳುತ್ತಿರುವುದು ವಿಡಿಯೋದಲ್ಲಿದೆ.
ಇದನ್ನೂ ಓದಿರಿ:ರಷ್ಯಾ-ಉಕ್ರೇನ್ ಸಂಘರ್ಷ: ನಾಳೆ ಮತ್ತೊಂದು ಸುತ್ತಿನ ಮಹತ್ವದ ಕದನ ವಿರಾಮ ಮಾತುಕತೆ
ವಿಡಿಯೋ ಶೇರ್ ಮಾಡಿಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಅಖಿಲೇಶ್ ಯಾದವ್, ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆ ಮಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಅಲ್ಲಿನ ಮಕ್ಕಳ ನೋವು ಅರ್ಥ ಮಾಡಿಕೊಳ್ಳದಿರುವುದು ನಿಜಕ್ಕೂ ಖಂಡನೀಯ ಎಂದಿದ್ದಾರೆ.