ಪ್ಯಾರಿಸ್(ಫ್ರಾನ್ಸ್): ದಿನೆ ದಿನೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಈ ಹಿನ್ನೆಲೆ ರೆಸ್ಟೋರೆಂಟ್‌ಗಳು, ಪ್ರವಾಸಿ ತಾಣಗಳು, ಚಿತ್ರಮಂದಿರಗಳು ಹಾಗೂ ಇತರ ಜನ ಸಂದಣಿ ಇರುವ ಸ್ಥಳಗಳಿಗೆ ಲಸಿಕೆ ಪಡೆಯದ ಜನರಿಗೆ ನಿಷೇಧ ವಿಧಿಸಿ ಹೊಸ ಕಾನೂನು ಜಾರಿಗೆ ತರಲು ಫ್ರಾನ್ಸ್ ಸರ್ಕಾರ ನಿರ್ಧರಿಸಿದೆ. ಫ್ರಾನ್ಸ್ ಸಂಸತ್ತು ಭಾನುವಾರ ಈ ನಿರ್ಣಯವನ್ನು ಅಂಗೀಕರಿಸಿದೆ.
ರಾಷ್ಟ್ರೀಯ ಅಸೆಂಬ್ಲಿ 215 - 58 ಮತಗಳಿಂದ ಕಾನೂನನ್ನು ಅಂಗೀಕರಿಸಿದೆ. ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ವಿಧೇಯಕಕ್ಕೆ ಅಂಗೀಕಾರ ಪಡೆದುಕೊಂಡಿದ್ದು, ಶೀಘ್ರವಾಗಿ ಹೊಸ ಕಾನೂನು ಜಾರಿಗೆ ತರಲು ಆದೇಶಿಸಿದ್ದಾರೆ.
ಹೊಸ ಕಾನೂನಿನ ಅನ್ವಯ ಪ್ರವಾಸಿ ತಾಣಗಳು, ರೆಸ್ಟೋರೆಂಟ್‌ಗಳು, ರೈಲುಗಳು ಮತ್ತು ಎಲ್ಲ ದೇಶೀಯ ವಿಮಾನಗಳು ಸೇರಿದಂತೆ ಹಲವು ಸ್ಥಳಗಳಿಗೆ ಸಂಪೂರ್ಣ ವ್ಯಾಕ್ಸಿನೇಷನ್ ಅಗತ್ಯವಿರುತ್ತದೆ. 16 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲರಿಗೂ ಈ ಕಾನೂನು ಅನ್ವಯಿಸುತ್ತದೆ ಎಂದು ಹೇಳಲಾಗಿದೆ.
ಆದರೆ ಶೇ.91 ಕ್ಕಿಂತ ಹೆಚ್ಚು ಫ್ರೆಂಚ್ ವಯಸ್ಕರು ಈಗಾಗಲೇ ಲಸಿಕೆಯನ್ನು ಪಡೆದಿದ್ದಾರೆ. ಆದರೂ ಈ ಕಾನೂನು ಅಗತ್ಯವೇ ಎಂದು ಕೆಲವು ವಿಮರ್ಶಕರು ಪ್ರಶ್ನಿಸಿದ್ದಾರೆ.