ಪ್ಯಾರಿಸ್:ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆ(ಎಫ್ಎಟಿಎಫ್) ಪಾಕಿಸ್ತಾನವನ್ನು ಗ್ರೇ ಪಟ್ಟಿಯಲ್ಲೇ ಮುಂದುವರೆಸುವ ಸಾಧ್ಯತೆ ನಿಚ್ಚಳವಾಗಿದ್ದು, ಇಂದು ಅಧಿಕೃತ ಮಾಹಿತಿ ಹೊರಬೀಳಲಿದೆ.
ಪ್ಯಾರಿಸ್ನಲ್ಲಿ ನಡೆದ ಎಫ್ಎಟಿಎಫ್ ಸಭೆಯ ಅಂತಿಮ ದಿನವಾದ ಇಂದು ಪಾಕಿಸ್ತಾನ ಭವಿಷ್ಯ ನಿರ್ಧಾರವಾಗಲಿದೆ. ಸದ್ಯ ದೊರೆತಿರುವ ಮಾಹಿತಿ ಪ್ರಕಾರ, 2020 ಫೆಬ್ರವರಿ ತನಕ ಪಾಕಿಸ್ತಾನ ಗ್ರೇ ಲಿಸ್ಟ್ನಲ್ಲೇ ಮುಂದುವರೆಯಲಿದೆ ಎಂದು ತಿಳಿದು ಬಂದಿದೆ.
ಪಾಕ್ ಪರಿಸ್ಥಿತಿ ಮತ್ತಷ್ಟು ದುರ್ಬರ! 'ಡಾರ್ಕ್ ಗ್ರೇ' ಪಟ್ಟಿಯ ಸನಿಹ ಇಮ್ರಾನ್ 'ನಯಾ ಪಾಕಿಸ್ತಾನ್'
ಪಾಕಿಸ್ತಾನವನ್ನು ಗ್ರೇ ಲಿಸ್ಟ್ನಲ್ಲೇ ಉಳಿಸುವ ಮೂಲಕ ಭಯೋತ್ಪಾದನೆ ನಿಗ್ರಹಕ್ಕೆ ಹೆಚ್ಚಿನ ಒತ್ತು ನೀಡಿ ಉಗ್ರ ಸಂಹಾರ ಮಾಡಬೇಕು ಎನ್ನುವ ಸಂದೇಶವನ್ನು ಎಫ್ಎಟಿಎಫ್ ರವಾನಿಸಲು ಉದ್ದೇಶಿಸಿದೆ. ಪಾಕಿಸ್ತಾನ ಯಾವುದೇ ಪಟ್ಟಿ ಸೇರಿದರೂ ದೇಶದ ಆರ್ಥಿಕತೆ, ಜಾಗತಿಕ ನೆರವು ಹಾಗೂ ವಿಶ್ವಮಟ್ಟದಲ್ಲಿ ಪಾಕಿಸ್ತಾನದ ಸ್ಥಾನಮಾನಕ್ಕೆ ದೊಡ್ಡ ಹಿನ್ನಡೆಯುಂಟಾಗಲಿದೆ.
2018 ಜೂನ್ ತಿಂಗಳಿನಿಂದ ಪಾಕಿಸ್ತಾನ ಉಗ್ರ ನಿಗ್ರಹದಲ್ಲಿ ಹಿಂದುಳಿದ ಪರಿಣಾಮ ಗ್ರೇ ಲಿಸ್ಟ್ನಲ್ಲಿದೆ. ಎಫ್ಎಟಿಎಫ್ 27 ಅಂಶಗಳಲ್ಲಿ ಸುಧಾರಿಸುವಂತೆ ಪಾಕಿಸ್ತಾನಕ್ಕೆ ಸೂಚಿಸಿತ್ತು. ಇದಕ್ಕಾಗಿ 15 ತಿಂಗಳುಗಳ ಕಾಲಾವಕಾಶವನ್ನು ನೀಡಿತ್ತು. ಮುಂದಿನ ಫೆಬ್ರವರೆಗೂ ಪಾಕಿಸ್ತಾನ ಭಯೋತ್ಪಾದನೆ ನಿಗ್ರಹದಲ್ಲಿ ಸುಧಾರಣೆ ಕಾಣದಿದ್ದಲ್ಲಿ ಇರಾನ್ ಹಾಗೂ ಉತ್ತರ ಕೊರಿಯಾ ಜೊತೆಗೆ ಕಪ್ಪುಪಟ್ಟಿಗೆ ಸೇರುವುದು ನಿಶ್ಚಿತ.