ವೆಲ್ಲಿಂಗ್ಟನ್:ನ್ಯೂಜಿಲೆಂಡ್ನ ಕ್ರೈಸ್ಟ್ಚರ್ಚ್ನ ಎರಡು ಮಸೀದಿಗಳಿಗೆ ನುಗ್ಗಿ, ಪ್ರಾರ್ಥನಾ ನಿರತ 51 ಜನರನ್ನು ಗುಂಡಿಕ್ಕಿ ಸಾಯಿಸಿದ್ದ ವ್ಯಕ್ತಿ ನ್ಯಾಯಾಲಯದ ಮುಂದೆ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಇಷ್ಟು ದಿನ ತಾನು ಯಾವುದೇ ತಪ್ಪು ಮಾಡಿಯೇ ಇಲ್ಲವೆಂದು ವಾದಿಸುತ್ತಿದ್ದ ಆರೋಪಿ ಈಗ ದಿಢೀರನೆ ತಪ್ಪೊಪ್ಪಿಕೊಂಡಿದ್ದು ಆಶ್ಚರ್ಯ ಮೂಡಿಸಿದೆ.
ವರ್ಷದ ಹಿಂದೆ, ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಮೇಲೆ ಹಠಾತ್ತಾಗಿ ಗುಂಡಿನ ಸುರಿಮಳೈಗೈದು 51 ಜನರ ಸಾವಿಗೆ ಈ ವ್ಯಕ್ತಿ ಕಾರಣನಾಗಿದ್ದ. ಈ ಘಟನೆ ನ್ಯೂಜಿಲೆಂಡ್ ಮಾತ್ರವಲ್ಲದೆ ಇಡೀ ವಿಶ್ವವೇ ತಲ್ಲಣಗೊಳ್ಳುವಂತೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಪ್ರಕರಣದ ನಂತರ ನ್ಯೂಜಿಲೆಂಡ್ ದೇಶದಲ್ಲಿ ಸೆಮಿ ಅಟೊಮ್ಯಾಟಿಕ್ ಗನ್ ನಿರ್ಬಂಧಿಸಲು ಹೊಸ ಕಾನೂನುಗಳನ್ನೇ ಜಾರಿಗೆ ತರಲಾಗಿತ್ತು. ಅಲ್ಲದೆ ಕೊಲೆ ಮಾಡುವ ದೃಶ್ಯವನ್ನು ಈತ ಫೇಸ್ಬುಕ್ ಮೂಲಕ ಲೈವ್ ಆಗಿ ಸ್ಟ್ರೀಮ್ ಮಾಡಿದ್ದ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಸ್ಟ್ರೀಮಿಂಗ್ ಕುರಿತಾಗಿಯೂ ಹಲವಾರು ಪ್ರಶ್ನೆಗಳು ಉದ್ಭವಿಸಿದ್ದವು. ಕೊಲೆ ಮಾಡುವ ಮುನ್ನ ತಾನ್ಯಾಕೆ ಈ ಕೃತ್ಯ ಎಸಗುತ್ತಿರುವೆ ಎಂಬ ಕುರಿತಾಗಿ 74 ಪುಟಗಳ ಬರಹವನ್ನು ಕೂಡ ಈತ ಅಪ್ಲೋಡ್ ಮಾಡಿದ್ದ.