ಬ್ರಸೆಲ್ಸ್ (ಬೆಲ್ಜಿಯಂ):ಯುರೋಪಿನಲ್ಲಿಕೊರೊನಾ ವೈರಸ್ ಭೀತಿಗೆ ಲಕ್ಷಾಂತರ ಜನ ಮನೆಗೇ ಸೀಮಿತರಾಗಿರುವ ಪರಿಣಾಮ ಇಂಟರ್ನೆಟ್ ಮೇಲಿನ ಒತ್ತಡ ಕಡಿಮೆಗೊಳಿಸಲು ಮನರಂಜನೆ ನೀಡುವ ಚಾನೆಲ್ಗಳಾದ ನೆಟ್ಫ್ಲಿಕ್ಸ್ ಮತ್ತು ಯುಟ್ಯೂಬ್ನಲ್ಲಿ ವಿಡಿಯೋ ಸ್ಟ್ರೀಮಿಂಗ್ ಮತ್ತು ಫೋಟೋಗಳ ರೆಸಲ್ಯೂಶನ್ ಕಡಿಮೆಗೊಳಿಸಲಾಗುತ್ತದೆ ಎಂದು ಸಂಸ್ಥೆಗಳು ತಿಳಿಸಿವೆ.
ಯುರೋಪಿಯನ್ ಒಕ್ಕೂಟದ ಡಿಜಿಟಲ್ ಆರ್ಥಿಕತೆ ಆಯುಕ್ತ ಥಿಯರಿ ಬ್ರೆಟನ್ ಅವರು, ಮನರಂಜನೆ ಜೊತೆಗೆ ಕೊರೊನಾ ವೈರಸ್ ಕುರಿತು ಮಾಹಿತಿ ಬಿತ್ತರಿಸುವ ಸಲುವಾಗಿ ಚಾನೆಲ್ಗಳಲ್ಲಿ ಪ್ರಸಾರವಾಗುವ ವಿಡಿಯೋ ಮತ್ತು ಫೋಟೋಗಳನ್ನು ಹೈ ಡೆಫಿನೇಷನ್ನಿಂದ (HD) ಸ್ಟ್ಯಾಂಡರ್ಡ್ ಡೆಫಿನೇಷನ್ಗೆ (SD) ಇಳಿಸುವಂತೆ ಒತ್ತಾಯಿಸಿದ್ದರು. ಬ್ರೆಟನ್ ಅವರ ಮನವಿಗೆ ಈ ಸಂಸ್ಥೆಗಳು ತಡವಾಗಿ ಒಪ್ಪಿಗೆ ಸೂಚಿಸಿವೆ.
ಗೂಗಲ್ನಲ್ಲಿ ವಿಡಿಯೋ ಹಂಚಿಕೆಗೆ ಸಂಬಂಧಿಸಿದಂತೆ ಅನುಸರಿಸುವುದಾಗಿ ಯೂಟ್ಯೂಬ್ ಹೇಳಿದೆ. ಆದರೆ, ಸೈಟ್ನಲ್ಲಿ ವೀಕ್ಷಿಸಿದ ವಿಡಿಯೋಗಳು ಇನ್ನೂ ಹೈ ಡೆಫಿನೇಷನ್ನಲ್ಲೇ ಇವೆ ಎಂದು ಎಎಫ್ಪಿ ವರದಿ ಮಾಡಿದೆ. ಕಡಿಮೆ ನೆಟ್ವರ್ಕ್ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಸಿಸ್ಟಮ್ನಲ್ಲಿ ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಗೂಗಲ್ ವಕ್ತಾರರು ಹೇಳಿದ್ದಾರೆ.
ಗೂಗಲ್ ಸಿಇಒ ಸುಂದರ್ ಪಿಚೈ, ಯೂಟ್ಯೂಬ್ ಸಿಇಒ ಸುಸಾನ್ ವೋಜ್ಸಿಕಿ ಮತ್ತು ಆಯುಕ್ತ ಥಿಯರಿ ಬ್ರೆಟನ್ ಅವರ ಚರ್ಚಿಸಿದ ನಂತರ ಪೂರ್ವ ನಿಯೋಜಿತವಾಗಿ ಯಾವುದೇ ಸಮಸ್ಯೆ ಉಂಟಾಗದಂತೆ ತಾತ್ಕಾಲಿಕವಾಗಿ ಸ್ಟ್ಯಾಂಡರ್ಡ್ ಡೆಫಿನಿಷೇನ್ಗೆ ಬದಲಾಯಿಸುವ ಪ್ರಕ್ರಿಯೆ ನಡೆಸುತ್ತಿದ್ದೇವೆ. ನೆಟ್ಫ್ಲಿಕ್ಸ್ 30 ದಿನಗಳ ಕಾಲ ಯುರೋಪಿನಲ್ಲಿ ಬಿಟ್ದರ ಕಡಿಮೆಗೊಳಿಸಲು ತಯಾರಿನ ನಡೆಸುತ್ತಿದೆ ಎಂದು ಸ್ಟ್ರೀಮಿಂಗ್ ವಕ್ತಾರರು ಹೇಳಿದ್ದಾರೆ.
ಡೆಫನೇಷನ್ ಕಡಿಮೆಗೊಳಿಸಿದರೆ 25 ಪ್ರತಿಶತದಷ್ಟು ಒತ್ತಡ ಕಡಿಮೆ ಮಾಡುತ್ತದೆ ಎಂಬ ಅಂದಾಜು ಇದೆ ಎಂದು ವಕ್ತಾರರು ಹೇಳಿದ್ದಾರೆ. ನೆಟ್ಪ್ಲಿಕ್ಸ್ ಜೊತೆಗೆ ಡಿಸ್ನಿ ಫ್ಲಸ್, ಹುಲು, ಎಚ್ಬಿಒ ಮತ್ತು ಅಮೆಜಾನ್ಗಳಿಗೂ ಬ್ರೆಟನ್ ಎಚ್ಚರ ನೀಡಿದ್ದಾರೆ. ಕೊರೊನಾ ವೈರಸ್ ಭೀತಿ ಹಿನ್ನೆಲೆ ಕ್ಯಾರೆಂಟೈನ್, ಶಾಲೆಗಳು, ಅಂಗಡಿಗಳು ಮತ್ತು ಗಡಿಗಳನ್ನು ಮುಚ್ಚಲಾಗಿದೆ ಮತ್ತು ಸಭೆ-ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ. ಆದ್ದರಿಂದ ಯುರೋಪಿನ ಹೆಚ್ಚು ಜನ ಮನೆಯಲ್ಲೇ ತಂಗಿದ್ದಾರೆ.