ನವದೆಹಲಿ:ಬೆಲಾರಸ್ ನೇತೃತ್ವದಲ್ಲಿ ಪೋಲೆಂಡ್ ಹಾಗೂ ಬೆಲಾರಸ್ ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಮಾತುಕತೆ ಅಂತಿಮ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿದ್ದರೂ ಮಾಸ್ಕೋ ಮತ್ತು ಕೀವ್ ಕದನ ವಿರಾಮ ಮಾತುಕತೆಯ ಸಮಯದಲ್ಲಿ ಒಪ್ಪಿಕೊಳ್ಳಬಹುದಾದ ಕೆಲವು ಅಂಶಗಳನ್ನು ಕಂಡುಕೊಂಡಿವೆ ಎಂದು ವರದಿಯಾಗಿದೆ. ಮುಂದಿನ ಸುತ್ತಿನ ಮಾತುಕತೆ ವೇಳೆ ಒಂದು ನಿಲುವಿಗೆ ಬರುವ ಸಾಧ್ಯತೆಗಳಿವೆ ಎಂದು ಆರ್‌ಟಿ ವರದಿ ಮಾಡಿದೆ.
ನಿನ್ನೆ ಐದು ಗಂಟೆಗಳಿಗೂ ಹೆಚ್ಚಿನ ಕಾಲ ನಡೆದ ಮಾತುಕತೆ ವೇಳೆ, ಉಕ್ರೇನ್ ಕದನ ವಿರಾಮಕ್ಕೆ ಪಟ್ಟು ಹಿಡಿದಿದೆ. ಅತ್ತ ರಷ್ಯಾ ತನ್ನ ಪಟ್ಟ ಸಡಿಲಿಸಲು ಹಿಂಜರಿದೆ. ಈ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್, ಕದನ ವಿರಾಮದ ಕುರಿತು ಚರ್ಚಿಸುವುದೇ ಮಾತುಕತೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಮಾತುಕತೆ ವೇಳೆ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗದಿದ್ದರೂ, ಎರಡು ಕಡೆಯವರು ಹಲವಾರು ಆದ್ಯತೆಯ ವಿಷಯಗಳನ್ನು ಗುರುತಿಸುವಲ್ಲಿ ಸಫಲರಾಗಿದ್ದಾರೆ. ಅಷ್ಟೇ ಅಲ್ಲ ಕೆಲವು ಪರಿಹಾರಗಳನ್ನು ಹೇಗೆ ಕಂಡುಕೊಳ್ಳಬಹುದು ಎಂಬ ಬಗ್ಗೆಯೂ ಮಾತುಕತೆ ವೇಳೆ ಚರ್ಚಿಸಲಾಗಿದೆ ಎಂದು ಮೈಖೈಲೊ ಪೊಡೊಲ್ಯಾಕ್ ಹೇಳಿದ್ದಾರೆ.