ನವದೆಹಲಿ:ಕಳೆದ ಎರಡು ದಿನಗಳಿಂದ ರಷ್ಯಾ-ಉಕ್ರೇನ್ ಮಧ್ಯೆ ಯುದ್ಧ ನಡೆಯುತ್ತಿದ್ದು, ಎರಡು ದೇಶದಲ್ಲಿ ಅಪಾರ ಪ್ರಮಾಣದ ಸಾವು - ನೋವು ಉಂಟಾಗುತ್ತಿದೆ. ಇದರ ಮಧ್ಯೆ ರಷ್ಯಾದ ಸಾವಿರಕ್ಕೂ ಅಧಿಕ ಸೈನಿಕರು ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆಂದು ಉಕ್ರೇನ್ ರಕ್ಷಣಾ ಸಚಿವಾಲಯ ತಿಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡುತ್ತಿದ್ದಂತೆ ಉಭಯ ದೇಶಗಳು ಯುದ್ಧದಲ್ಲಿ ಭಾಗಿಯಾಗಿದ್ದು, ಉಕ್ರೇನ್ನ ಬಹುತೇಕ ಎಲ್ಲ ನಗರಗಳ ಮೇಲೆ ರಷ್ಯಾ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಉಕ್ರೇನ್ ಕೂಡ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಇಷ್ಟೊಂದು ಯೋಧರು ಹತ್ಯೆ ಮಾಡಿರುವುದಾಗಿ ಮಾಹಿತಿ ಹಂಚಿಕೊಂಡಿದೆ.
ಮಾತುಕತೆಗೆ ಸಿದ್ಧ ಎಂದ ಪುಟಿನ್
ಯುದ್ಧ ಘೋಷಣೆ ಮಾಡಿದ ಎರಡು ದಿನಗಳ ಬಳಿಕ ಉಕ್ರೇನ್ ಜೊತೆ ಮಾತುಕತೆಗೆ ಸಿದ್ಧವಿರುವುದಾಗಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಘೋಷಣೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಭಾರತದಲ್ಲಿರುವ ರಷ್ಯಾ ರಾಯಭಾರ ಕಚೇರಿ ಮಾಹಿತಿ ಹಂಚಿಕೊಂಡಿದ್ದು, ರಷ್ಯಾ ಅಧ್ಯಕ್ಷರು ಉಕ್ರೇನ್ ಜೊತೆ ಮಾತುಕತೆಗೆ ಉನ್ನತ ಮಟ್ಟದ ಅಧಿಕಾರಿಗಳ ನಿಯೋಗ ಕಳುಹಿಸಲು ಸಿದ್ಧರಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿರಿ:ಅಪ್ಪಾ, ಅಮ್ಮಾ 'ಐ ಲವ್ ಯೂ'... ವೈರಲ್ ಆಯ್ತು ಉಕ್ರೇನ್ ಯೋಧನ ಭಾವುಕ ವಿಡಿಯೋ
ಉಕ್ರೇನ್ ವಿದೇಶಾಂಗ ಸಚಿವರೊಂದಿಗೆ ಜೈ ಶಂಕರ್ ಮಾತುಕತೆ
ರಷ್ಯಾ- ಉಕ್ರೇನ್ ಸಂಘರ್ಷದ ಮಧ್ಯೆ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರೊಂದಿಗೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾತುಕತೆ ನಡೆಸಿದ್ದು, ರಾಜತಾಂತ್ರಿಕವಾಗಿ ಸಹಾಯ ಮಾಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ವಿಚಾರವಾಗಿ ಮಾತುಕತೆ ನಡೆಸಿದ್ದಾಗಿ ಟ್ವೀಟ್ ಮಾಡಿದ್ದಾರೆ.