ಕೀವ್(ಉಕ್ರೇನ್): ರಷ್ಯಾದ ಗೂಢಚಾರನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಶಂಕೆಯ ಆಧಾರದ ಮೇಲೆ ಉಕ್ರೇನ್ ಸಂಧಾನ ನಿಯೋಗದ ಸದಸ್ಯನನ್ನು ಶನಿವಾರ ಸೆಕ್ಯುರಿಟಿ ಸರ್ವೀಸ್ ಆಫ್ ಉಕ್ರೇನ್ (SBU) ಕೊಂದಿದೆ ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿದ್ದು, ಅಧಿಕೃತವಾಗಿ ದೃಢೀಕರಣಗೊಂಡಿಲ್ಲ.
ಡೆನಿಸ್ ಕಿರೀವ್ ಎಂಬಾತನನ್ನು ಹತ್ಯೆ ಮಾಡಲಾಗಿದ್ದು, ಆತನ ವಿರುದ್ಧ ದೇಶದ್ರೋಹ ಆರೋಪಗಳಿದ್ದು, ಆರೋಪಗಳಿಗೆ ಸಾಕ್ಷ್ಯಗಳಿವೆ ಎಂದು UNIAN ವರದಿ ಮಾಡಿದೆ. ಕಿರೀವ್ ಅವರ ಬಂಧನದ ವೇಳೆ ಸೆಕ್ಯುರಿಟಿ ಸರ್ವೀಸ್ ಆಫ್ ಉಕ್ರೇನ್ ಗುಂಡು ಹಾರಿಸಿ ಕೊಂದಿದೆ ಎಂದು ಹೇಳಲಾಗುತ್ತಿದೆ.
ಉಕ್ರೇನ್ನ ಮಾಜಿ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ ಅವರ ಸ್ನೇಹಿತರ ಬಳಗದಲ್ಲಿ ಡೆನಿಸ್ ಕಿರೀವ್ ಗುರುತಿಸಿಕೊಂಡಿದ್ದು, ವಿಕ್ಟರ್ ಯಾನುಕೋವಿಚ್ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಮಿತ್ರನಾಗಿದ್ದಾರೆ ಎಂದು ಪರಿಗಣಿಸಲಾಗಿದೆ.