ಕರ್ನಾಟಕ

karnataka

ETV Bharat / international

ಆ್ಯಂಟಿವೈರಸ್​ ಸಾಫ್ಟ್​ವೇರ್​ 'ಮೆಕಾಫೆ' ಸಂಸ್ಥಾಪಕ ಜೈಲಿನಲ್ಲಿ ಶವವಾಗಿ ಪತ್ತೆ - ಸ್ಪೇನ್

ಅಮೆರಿಕದ 'ಮೆಕಾಫೆ' ಎಂಬ ಆ್ಯಂಟಿವೈರಸ್​ ಸಾಫ್ಟ್​ವೇರ್ ಸಂಸ್ಥಾಪಕ ಜಾನ್ ಮೆಕಾಫೆ ಸ್ಪೇನ್‌ನ ಜೈಲಿನಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಹೇಳಲಾಗಿದೆ.

John McAfee
ಜಾನ್ ಮೆಕಾಫೆ

By

Published : Jun 24, 2021, 7:10 AM IST

ಮ್ಯಾಡ್ರಿಡ್ (ಸ್ಪೇನ್): ತೆರಿಗೆ ವಂಚನೆ ಪ್ರಕರಣದ ಆರೋಪಿಯಾಗಿರುವ 'ಮೆಕಾಫೆ' ಎಂಬ ಆ್ಯಂಟಿವೈರಸ್​ ಸಾಫ್ಟ್​ವೇರ್ ಸಂಸ್ಥಾಪಕ ಜಾನ್ ಮೆಕಾಫೆ (75) ಸ್ಪೇನ್‌ನ ಜೈಲಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಕಾರಾಗೃಹದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಪ್ಯಾನಿಷ್ ನ್ಯಾಯಾಲಯವು ಮೆಕಾಫೆಯನ್ನು ಅಮೆರಿಕಕ್ಕೆ ಹಸ್ತಾಂತರಿಸಲು ಅನುಮೋದನೆ ನೀಡಿದ ಬೆನ್ನಲ್ಲೇ ಅವರ ಸಾವು ಸಂಭವಿಸಿದೆ.

ಬಾರ್ಸಿಲೋನಾ ಬಳಿಯ ಬ್ರಿಯಾನ್ಸ್ -2 ಕಾರಾಗೃಹದ ತನ್ನ ಕೋಣೆಯಲ್ಲಿ ಮೆಕಾಫೆ ಶವವಾಗಿ ಪತ್ತೆಯಾಗಿದೆ. ಇದು ಆತ್ಮಹತ್ಯೆಯೆಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದು ಈಶಾನ್ಯ ಕ್ಯಾಟಲೊನಿಯಾ ಪ್ರದೇಶದ ಜೈಲು ವ್ಯವಸ್ಥೆಯ ವಕ್ತಾರರು ಹೇಳಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅವರು ನೀಡಲಿಲ್ಲ.

ಪ್ರಕರಣ ಹಿನ್ನೆಲೆ:

ಜಾನ್ ಮೆಕಾಫೆ 1987ರಲ್ಲಿ ಅಮೆರಿಕದಲ್ಲಿ 'ಮೆಕಾಫೆ ಕಂಪ್ಯೂಟರ್​ ಸೆಕ್ಯುರಿಟಿ ಸಂಸ್ಥೆ'ಯನ್ನು ಸ್ಥಾಪಿಸಿದ್ದರು. 2014ರಿಂದ 2018ರ ಅವಧಿಯಲ್ಲಿ ಮೆಕಾಫೆ 12 ಮಿಲಿಯನ್ ಡಾಲರ್​​ಗಿಂತಲೂ ಹೆಚ್ಚು ಆದಾಯ ಗಳಿಸಿದ್ದರೂ ಸರ್ಕಾರಕ್ಕೆ ತೆರಿಗೆ ಕಟ್ಟದೆ ವಂಚಿಸಿರುವ ಆರೋಪ ಎದುರಿಸುತ್ತಿದ್ದರು. ಅಪರಾಧ ಸಾಬೀತಾದರೆ ಅವರು 30 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಬೇಕಿತ್ತು.

2020ರ ಅಕ್ಟೋಬರ್​ನಲ್ಲಿ ಇಸ್ತಾಂಬುಲ್‌ಗೆ ವಿಮಾನ ಹತ್ತಲು ಹೊರಟಿದ್ದ (ಬಹುಷಃ ಪರಾರಿಯಾಗಲು ಹೊರಟಿದ್ದ) ಮೆಕಾಫೆಯನ್ನು ಸ್ಪೇನ್​ನ ಬಾರ್ಸಿಲೋನಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಅಂದಿನಿಂದ ಸ್ಪೇನ್​ನ ಜೈಲಿನಲ್ಲಿದ್ದ ಮೆಕಾಫೆಯನ್ನು ಅಮೆರಿಕಕ್ಕೆ ಹಸ್ತಾಂತರಿಸಲು ನಿನ್ನೆ ಸ್ಪ್ಯಾನಿಷ್ ಕೋರ್ಟ್ ಸಮ್ಮತಿಸಿತ್ತು. ಆದರೆ ಇದಕ್ಕಿನ್ನೂ ಸ್ಪೇನ್ ಸಂಪುಟದ ಅನುಮತಿ ಬೇಕಿತ್ತು. ಅಲ್ಲದೇ ಈ ಬಗ್ಗೆ ಮೇಲ್ಮನವಿ ಸಲ್ಲಿಸಬಹುದಿತ್ತು. ಆದರೆ ಕೋರ್ಟ್​ ಅನುಮೋದನೆ ನೀಡಿದ ಕೆಲವೇ ಗಂಟೆಗಳಲ್ಲಿ ಮೆಕಾಫೆ ಮೃತಪಟ್ಟಿರುವುದು ತಿಳಿದು ಬಂದಿದೆ.

ABOUT THE AUTHOR

...view details